ಬೆಂಗಳೂರು: ಗುರು ಪೂರ್ಣಿಮೆ ಹಿನ್ನೆಲೆ ಸಂಸದ ತೇಜಸ್ವಿ ಸೂರ್ಯ ಅವರು ಸಾಯಿ ಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಹಿಂದೂ ಪರಂಪರೆಯಲ್ಲಿ ಗುರು ಪೂರ್ಣಿಮೆಗೆ ವಿಶೇಷವಾದ ಮಹತ್ವವಿದೆ. ನಮ್ಮಲ್ಲಿರುವ ಪದ್ದತಿಗಳು, ಸಂಗೀತ, ಸಾಹಿತ್ಯ ಇವೆಲ್ಲವೂ ಬಂದಿರುವುದು ಗುರುವಿನ ಮೂಲಕ. ಒಂದು ರೀತಿ ನಮ್ಮ ಧರ್ಮ ನಿಂತಿರುವುದೇ ಗುರುವಿನ ಮೇಲೆ. ಹಾಗಾಗಿ ದೇವಸ್ಥಾನವನ್ನು ಬಹಳ ವಿನೂತನವಾಗಿ ಅಲಂಕರಿಸಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದರು.
ದೇವರ ದರ್ಶನ ಪಡೆದ ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಇನ್ನು ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ತುಟಿ ಬಿಚ್ಚದ ಸಂಸದ ತೇಜಸ್ವಿ ಸೂರ್ಯ, ದೇವಾಲಯದಲ್ಲಿ ರಾಜಕೀಯದ ಕುರಿತು ಮಾತನಾಡುವುದು ಬೇಡ. ಇಂದು ಗುರು ಪೂರ್ಣಿಮೆಯಾದ ಕಾರಣ ದೇವರ ದರ್ಶನಕ್ಕೆ ಬಂದಿದ್ದೇನೆ. ಇಲ್ಲಿ ಏನೂ ಮಾತನಾಡುವುದಿಲ್ಲ ಎಂದರು.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ:
ಗುರು ಪೂರ್ಣಿಮೆ ಹಿನ್ನೆಲೆ ನಗರದ ಎಲ್ಲ ಸಾಯಿ ಬಾಬಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಜೆ.ಪಿ.ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಾಲಯವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದ್ದು, ಕೊರೊನಾ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 3 ಲಕ್ಷ ಮಾತ್ರೆಗಳನ್ನು ಬಳಸಿ ದೇವಾಲಯವನ್ನು ಅಲಂಕಾರ ಮಾಡಲಾಗಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಖ್ಯ ಅಸ್ತ್ರವಾಗಿರುವ ಪ್ಯಾರಾಸಿಟಮಾಲ್, ವಿಟಮಿನ್ ಸಿ, ಡೋಲೋ 650, ಈಸಿಬ್ರೀತ್, ಅಲ್ಕಾಫ್, ಬಿ ಕಾಂಪ್ಲೆಕ್ಸ್ ಸೇರಿದಂತೆ 3 ಲಕ್ಷ ಮಾತ್ರೆಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ. ಜೊತೆಗೆ 8 ವಿವಿಧ ಬಣ್ಣಗಳ 10 ಸಾವಿರ ಮಾಸ್ಕ್ಗಳು, 3 ಸಾವಿರಕ್ಕೂ ಹೆಚ್ಚು ಮೆಡಿಮಿಕ್ಸ್ ಹಾಗೂ ಡೆಟಾಲ್ ಸೋಪುಗಳು, 500 ಕ್ಕೂ ಹೆಚ್ಚು ಟೆನ್ನಿಸ್ ಬಾಲ್, ತೆಂಗಿನಕಾಯಿ , ಮೆಕ್ಕೆಜೋಳ ಸೇರಿದಂತೆ ದಿನಸಿ ಕಿಟ್ನಿಂದ ದೇವಾಲಯದ ಒಳಭಾಗವನ್ನು ಸಿಂಗರಿಸಲಾಗಿದೆ.