ಬೆಂಗಳೂರು:ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಸಾಮಾನ್ಯ ಕೋರಿಕೆ, ಪರಸ್ಪರ ಜಿಲ್ಲಾ, ವಿಭಾಗೀಯ, ಅಂತರ್ ವಿಭಾಗೀಯ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಯು ನವೆಂಬರ್ 29 (ಸೋಮವಾರ)ರಂದು ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ನವೆಂಬರ್ 24ಕ್ಕೆ ನಡೆಯಬೇಕಿದ್ದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ 2020-21 ಸಾಲಿನ ಶಿಕ್ಷಕರ ಮಂಜೂರಾದ ಹುದ್ದೆಗಳ ಆಧಾರದ ಮೇಲೆ ನಡೆಸಬೇಕಾಗಿತ್ತು. ಅಲ್ಲದೇ, ಇದಕ್ಕಾಗಿ ತಂತ್ರಾಂಶವನ್ನು ಸಿದ್ದಪಡಿಸಿಕೊಳ್ಳಬೇಕಾಗಿತ್ತು. ತಂತ್ರಾಂಶ ಸಿದ್ಧವಾಗದ ಕಾರಣ ಕೌನ್ಸಿಲಿಂಗ್ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇದೀಗ ಇದೇ ನ.29ರಂದು ವರ್ಗಾವಣೆ ಕೌನ್ಸಿಲಿಂಗ್ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಸರ್ಕಾರ ನೀಡಿರುವ ಆದೇಶದಂತೆ, ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಟೆಸ್ಟ್ ಲಿಂಕ್ನಲ್ಲಿ ಟೆಸ್ಟ್ ಮಾಡಲು ಅವಕಾಶವನ್ನೂ ಕಲ್ಪಿಸಲಾಗಿತ್ತು. ಇದೀಗ ಅದು ಪೂರ್ಣಗೊಂಡಿರುವ ಕಾರಣ, 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢ ಶಾಲಾ ಶಿಕ್ಷಕರು, ತತ್ಸಮಾನದ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಾಮಾನ್ಯ ವರ್ಗಾವಣೆಗಳನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಸಾಮಾನ್ಯ ಕೋರಿಕೆ, ಪರಸ್ಪರ ಜಿಲ್ಲಾ, ವಿಭಾಗೀಯ, ಅಂತರ್ ವಿಭಾಗೀಯ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಯು ನವೆಂಬರ್ 29 ಸೋಮವಾರಂದು ನಡೆಯಲಿದೆ. ಈ ಹಿಂದೆ ನವೆಂಬರ್ 29ರಿಂದ ಡಿಸೆಂಬರ್ 4 ರ ತನಕ ಹಿಂದಿನ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿತ್ತು. ಇದೀಗ ಜನವರಿ 19 ರಿಂದ 27ರ ತನಕ ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆಯು ಡಿಸೆಂಬರ್ 16 ರಿಂದ ಹಾಗೂ ಅಂತರ್ ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳಿಗೆ ಡಿಸೆಂಬರ್ 24 ರಿಂದ ಕೌನ್ಸಿಲಿಂಗ್ ಶುರುವಾಗಲಿದೆ.