ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಒಂದಲ್ಲ ಒಂದು ಅಡೆತಡೆಗಳು ಬರುತ್ತಲೇ ಇದ್ದು, ಮುಂದೂಡಿಕೆಯಾಗುತ್ತಲೇ ಇದೆ. ಇಂದು ನಡೆಯಬೇಕಿದ್ದ ಕೌನ್ಸೆಲಿಂಗ್ ತಾತ್ಕಾಲಿಕವಾಗಿ ಮುಂದೂಡಿ ಇಲಾಖೆ ಆದೇಶಿಸಿದೆ.
ಕಳೆದ ವರ್ಷ ಅಕ್ಟೋಬರ್ 26ರಂದು ಪ್ರಾಥಮಿಕ ಹಾಗೂ 28ರಿಂದ ಪ್ರೌಢ ಶಾಲಾ ಶಿಕ್ಷಕರಿಗೆ ವರ್ಗಾವಣೆ ಪ್ರಕ್ರಿಯೆ ನಡೆಸಲು ವೇಳಾಪಟ್ಟಿ ಪ್ರಕಟವಾಗಿತ್ತು. ಆದರೆ ಅದ್ಯಾಕೋ ಏನೋ ಒಂದಲ್ಲ ಒಂದು ಕಾರಣಕ್ಕೆ ಸರಿಯಾಗಿ ಆಗದೇ ಮುಂದೂಡಿಕೆಯೇ ದೊಡ್ಡ ಮಟ್ಟದ ಪ್ರಕ್ರಿಯೆಯಾಗಿ ನಡೆಯುತ್ತಿದೆ.
ಅಂದಹಾಗೆ, ಈ ಹಿಂದೆ ಶಿಕ್ಷಣ ಇಲಾಖೆಯು ಶಿಕ್ಷಕರ ವರ್ಗಾವಣೆಗಾಗಿ ಕೌನ್ಸೆಲಿಂಗ್ ದಿನಾಂಕ ನಿಗದಿ ಮಾಡಿತ್ತು. ಆದರೆ ಕೌನ್ಸೆಲಿಂಗ್ ಆರಂಭವಾಗುವ ಕೊನೆ ಕ್ಷಣದಲ್ಲಿ ಕೆಲ ಶಿಕ್ಷಕರು ಕೆಎಟಿ ಮೊರೆ ಹೋಗಿದ್ದರು. ಈ ಕಾರಣದಿಂದಾಗಿ ವರ್ಗಾವಣೆಗೆ ತಡೆ ನೀಡಲಾಗಿತ್ತು.
ಬಳಿಕ ತಡೆಯಾಜ್ಞೆ ಅರ್ಜಿ ಖುಲಾಸೆ ಆಯ್ತು. ಕೆಲವರು ಕಡ್ಡಾಯ ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು, ಇದನ್ನ ಶಿಕ್ಷಣ ಇಲಾಖೆಯು ಪ್ರಶ್ನಿಸಿತ್ತು. ಕಡೆಗೆ ಶಿಕ್ಷಣ ಇಲಾಖೆ ಪರವಾಗಿ ತೀರ್ಪು ಬಂದು, ವರ್ಗಾವಣೆಗಾಗಿ ಸುಮಾರು 72,000 ಶಿಕ್ಷಕರು ಅರ್ಜಿ ಸಲ್ಲಿಸಿ ಕೌನ್ಸೆಲಿಂಗ್ಗಾಗಿ ಕಾಯ್ದಿದ್ದರು. ಬಳಿಕ ಪರಿಷ್ಕೃತ ವೇಳಾಪಟ್ಟಿಯನ್ನ ಪ್ರಕಟಿಸಿತ್ತು.
ಸರ್ವರ್ ತೊಂದರೆಯಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಮುಂದೂಡಿಕೆ ಆದರೆ, ವೇಳಾಪಟ್ಟಿ ಪ್ರಕಟವಾಗಿ ಕೌನ್ಸೆಲಿಂಗ್ ಶುರುವಾದರೂ ತಾಂತ್ರಿಕ ಕಾರಣ ಸೇರಿದಂತೆ ಮತ್ತಿತರ ವಿಚಾರವಾಗಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಸದ್ಯ ಇಂದಿನಿಂದ ನಡೆಯಬೇಕಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಇಂದಿನಿಂದ ಮೈಸೂರು ವಿಭಾಗದೊಳಗಿನ ವರ್ಗಾವಣೆಗಳು ಮತ್ತು ಪ್ರೌಢಶಾಲಾ ಶಿಕ್ಷಕರ ಅಂತರ್ ವಿಭಾಗದೊಳಗಿನ ವರ್ಗಾವಣೆಗಳನ್ನು ಸರ್ವರ್ ತೊಂದರೆಯಿಂದ ಮುಂದೂಡಲಾಗಿದೆ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕಳೆದ 13 ರಂದು ಹೊರಡಿಸಿದ್ದ ವೇಳಾಪಟ್ಟಿಯನ್ನ ಶೀಘ್ರದಲ್ಲಿಯೇ ಪರಿಷ್ಕರಿಸಿ ಪ್ರಕಟಿಸಲಾಗುವುದು ಅಂತ ಸೂಚಿಸಲಾಗಿದೆ.
(ಇದನ್ನೂ ಓದಿ: ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಭದ್ರತೆ: ಗಲಾಟೆ ಮಾಡಿ ಕರ್ನಾಟಕ ಪ್ರವೇಶ ಮಾಡುತ್ತಿರುವ ಪ್ರಯಾಣಿಕರು)