ಬೆಂಗಳೂರು:ಏಪ್ರಿಲ್ 23 ರಿಂದ ಪ್ರಾರಂಭವಾಗಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾದ ಶಿಕ್ಷಕರಲ್ಲಿ ಕೆಲವರು ಗೈರು ಹಾಜರಾಗಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಶೈಕ್ಷಣಿಕ ಚಟುವಟಿಕೆಗಳ ಒಂದು ಭಾಗವಾಗಿದೆ. ಯಾವುದೇ ಸಮಯದಲ್ಲಿ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಯಾವುದೇ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರನ್ನಾಗಲೀ ಅಥವಾ ಸಹ ಶಿಕ್ಷಕರನ್ನಾಗಲೀ ನಿಯೋಜನೆ ಮಾಡಿದಾಗ, ಅಂತಹ ಕಾರ್ಯಕ್ಕೆ ಹಾಜರಾಗುವುದು ಕರ್ತವ್ಯವಾಗಿದೆ.
ಮೌಲ್ಯಮಾಪಕರನ್ನಾಗಿ ನೇಮಿಸಿದಾಗ ಅವರೇ ಆಗಲಿ ಅಥವಾ ಅವರ ಕುಟುಂಬ ಸದಸ್ಯರ ತೀವ್ರ ಕಾಯಿಲೆ ಹೊರತುಪಡಿಸಿದರೆ, ಇತರರು ಮೌಲ್ಯಮಾಪನ ಕಾರ್ಯಕ್ಕೆ ಕಡ್ಡಾಯವಾಗಿ ಬರಬೇಕು. ಒಂದು ವೇಳೆ ಅನಿವಾರ್ಯ ಕಾರಣಕ್ಕಾಗಿ ಗೈರಾಗುವ ಮೌಲ್ಯಮಾಪಕರು ಜಿಲ್ಲಾ ಉಪನಿರ್ದೇಶಕರು ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು.