ಬೆಂಗಳೂರು: ಕೋವಿಡ್ ಕಾರಣದಿಂದ ಎರಡು ವರ್ಷ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಒಂದೇ ಬಾರಿಗೆ ಹುದ್ದೆ ಭರ್ತಿ ಸಾಧ್ಯವಿಲ್ಲ. ಹಂತ ಹಂತವಾಗಿ ಅನುದಾನಿತ ಶಾಲಾ ಕಾಲೇಜುಗಳ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ಕೊಟ್ಟರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅರುಣ್ ಶಹಾಪೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ಪ್ರದೇಶದ ಅನುದಾನಿತ ಶಾಲೆಗಳಲ್ಲಿ ಸಮಸ್ಯೆ ಆಗುತ್ತಿದೆ ಎನ್ನುವುದು ನಿಜ. ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ. ಆದರೂ ಹುದ್ದೆಗಳ ಭರ್ತಿಗೆ ಅನುಮತಿ ಕೊಡಲಿದ್ದೇವೆ. 5 ಸಾವಿರ ಭರ್ತಿ ಸುಲಭವಲ್ಲ, ಹಂತ ಹಂತವಾಗಿ ನೇಮಕ ಮಾಡಲು ಸಂಪುಟದಲ್ಲೂ ಚರ್ಚಿಸಲಿದ್ದೇವೆ ಎಂದರು. 2015 ರವರೆಗೆ 7,096 ಹುದ್ದೆಗಳು ಖಾಲಿಯಾಗಿವೆ. 2020 ರವರೆಗೆ 1,819 ಹುದ್ದೆ ಭರ್ತಿ, 2021-22ಕ್ಕೆ 801 ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಪರಿಷತ್‌ನಲ್ಲಿ ಹೈದರಾಬಾದ್ ಬಿರಿಯಾನಿ ಘಮಲು
ಬೀದರ್‌ನಲ್ಲಿ ಹೈದರಾಬಾದ್ ಬಿರಿಯಾನಿ ಚೆನ್ನಾಗಿ ಮಾಡುತ್ತಾರೆ. ಅಲ್ಲಿಗೆ ಹೋಗಿ ಬಿರಿಯಾನಿ ತಿಂದು ಬೀದರ್ ಜಿಲ್ಲೆಯ ಮಾಂಜ್ರಾ ಸರಣಿ ಬ್ಯಾರೇಜ್ ಗೇಟ್ ಸಮಸ್ಯೆ ಪರಿಶೀಲನೆ ಮಾಡಿಕೊಂಡು ಬರುತ್ತೇನೆ. ಏನೇ ಸಮಸ್ಯೆ ಇದ್ದರೂ ಪರಿಶೀಲಿಸಿ ಪರಿಹರಿಸಲಾಗುತ್ತದೆ ಎಂದು ಹಾಸ್ಯಮಯವಾಗಿ ಸಚಿವ ಗೋವಿಂದ ಕಾರಜೋಳ ಪರಿಷತ್ ಕಲಾಪದಲ್ಲಿ ಮಾತನಾಡಿದರು.
ಬಿಜೆಪಿ ಸದಸ್ಯ ರಘುನಾಥ್ ರಾವ್ ಮಲ್ಕಾಪುರೆ ಬೀದರ್ ಜಿಲ್ಲೆಯ ಮಾಂಜ್ರಾ ಸರಣಿ ಬ್ಯಾರೇಜ್ ಗೇಟ್ ಸಮಸ್ಯೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೈದರಾಬಾದ್-ಕರ್ನಾಟಕ ಹಿಂದುಳಿದ ಪ್ರದೇಶ ಆಗಬಾರದು ಎಂದೇ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದೇವೆ. 500 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ಕಟ್ಟಿಸುತ್ತಿದ್ದೇವೆ ಎಂದರು.
ಸ್ವಯಂಚಾಲಿತ ಗೇಟ್‌ಗಳು ಹೊಸ ತಂತ್ರಜ್ಞಾನ ಅಲ್ಲ, ಆದಿಲ್ ಶಾ ಅಂದಿನ ಕಾಲದಲ್ಲೇ ಕೆರೆಗೆ ಸ್ವಯಂ ಚಾಲಿತ ಗೇಟ್ ಹಾಕಿಸಿದ್ದ, ಈಗ ಕಾಮಗಾರಿ ವೇಳೆ ಅದು ಹಾಳಾಗಿದೆ. ಆದರೆ ಮಾಂಜ್ರಾ ಬ್ಯಾರೇಜ್‌ನಲ್ಲಿ ದೊಡ್ಡ ಪ್ರವಾಹದ ವೇಳೆ ಸ್ವಯಂಚಾಲಿತ ಗೇಟ್ ಕೆಲಸ ಮಾಡಲಿಲ್ಲ. ಹಾಗಾಗಿ 2017ರಲ್ಲಿ ಮ್ಯಾನ್ಯುಯಲ್ ಗೇಟ್ ಹಾಕಿಸಲಾಗಿದೆ. ಆದರೆ ಅದರಿಂದ ಸಮಸ್ಯೆಯಾಗಿದೆ ಎನ್ನುವ ಆರೋಪ ಬಂದಿದೆ. ಬೀದರ್‌ನವರು ಹೈದರಾಬಾದ್ ಬಿರಿಯಾನಿ ಮಾಡಲಿದ್ದಾರೆ, ಮಲ್ಕಾಪುರೆ ಮನೆಗೆ ಹೋಗಿ ಬಿರಿಯಾನಿ ತಿಂದು ಬ್ಯಾರೇಜ್‌ಗೆ ಹೋಗಿ ಪರಿಶೀಲನೆ ನಡೆಸುತ್ತೇನೆ, ಏನೇ ತೊಂದರೆ ಇದ್ದರೂ ಸರಿ ಮಾಡಿಕೊಡಲಾಗುತ್ತದೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಬಿರಿಯಾನಿ ತಿಂದು ಹಾಗೆ ಬರಬೇಡಿ, ಬ್ರಿಡ್ಜ್ ನೋಡಿ ಬನ್ನಿ ಎಂದು ಹಾಸ್ಯಚಟಾಕಿ ಹಾರಿಸಿದರು. ಇದಕ್ಕೆ ಕೈ ಮುಗಿದ ಕಾರಜೋಳ ಎಲ್ಲವನ್ನೂ ಮಾಡಿಕೊಂಡೇ ಬರುತ್ತೇನೆ ಎಂದರು.
ಕಲಾಪದಲ್ಲಿ 'ಸಿಡಿ' ಹಾಸ್ಯ:
ವಿಧಾನ ಪರಿಷತ್ ಕಲಾಪದ ವೇಳೆ ಸದನದಲ್ಲಿ ಸಿಡಿ ವಿಷಯದ ಕುರಿತು ಹಾಸ್ಯ ಚಟಾಕಿ ಹಾರಿಸಲಾಯಿತು. ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಸಣ್ಣ ನೀರಾವರಿ ಮತ್ತು ಕೆರೆಗಳ ಅಭಿವೃದ್ಧಿ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಮಾಧುಸ್ವಾಮಿ ಉತ್ತರದ ಕಡತವನ್ನು ಸಿಡಿ ರೂಪದಲ್ಲಿ ನೀಡಿದರು. ಇದಕ್ಕೆ ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದ ಶ್ರೀಕಂಠೇಗೌಡ, ಸಚಿವರು ಉತ್ತರ ಕೊಟ್ಟಿದ್ದಾರೆ ಆದರೆ ಸಿಡಿ ಕೊಟ್ಟಿದ್ದಾರೆ, ಯಾವ ಸಿಡಿ ಇದು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದಕ್ಕೆ ಸಚಿವ ಮಾಧುಸ್ವಾಮಿ ಕೌಂಟರ್ ನೀಡಿದರು. ಮಾಹಿತಿ ಇಷ್ಟೊಂದು ಕೇಳಿದಾಗ ಸಿಡಿನೂ ಕೊಡಬೇಕು,ಎನ್‌ಸೈಕ್ಲೋಪೀಡಿಯಾನು ಕೊಡಬೇಕಾಗಲಿದೆ. ಉತ್ತರ ಕೊಟ್ಟರೂ ಮಾತನಾಡುತ್ತೀರಿ, ಕೊಡದೇ ಇದ್ದರೂ ಮಾತನಾಡುತ್ತೀರಿ ಈಗ ಉತ್ತರದ ಸಿಡಿ ಕೊಟ್ಟರೆ ವ್ಯಂಗ್ಯ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.