ಬೆಂಗಳೂರು:ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬಾಲಕಾರ್ಮಿಕ ಎಂದು ಶಂಕಿಸಿ ಪ್ರಶ್ನಿಸಿದ ಶಿಕ್ಷಕನ ಮೇಲೆ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಲ್ಲೆ ಮಾಡಿರುವ ಆರೋಪ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಶಿಕ್ಷಕ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ವಿಚಾರಣೆಗೆ ಕರೆದಿದ್ದಾರೆ.
ಘಟನೆ ವಿವರಣ:ಜೈನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕತಿಮ್ಮಯ್ಯ ಎಂಬುವವರು ಮೇ 27 ರಂದು ಬೈಕ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ರಚನಾ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ಗೆ ಹೋಗಿದ್ದರು. ಪೆಟ್ರೋಲ್ ಹಾಕುತ್ತಿದ್ದ ಸಿಬ್ಬಂದಿ ಬಾಲಕನಂತೆ ಕಂಡು ಬಂದಿದ್ದರಿಂದ ಆತನಿಂದ ವಿವರ ಪಡೆದಿದ್ದಾರೆ.
ಇದಲ್ಲದೇ, ವಯೋಮಿತಿ ದೃಢೀಕರಣಕ್ಕೆ ಬಂಕ್ ಮ್ಯಾನೇಜರ್ ಮಾದೇಶ್ಗೆ ಬಾಲಕನ ಆಧಾರ್ ಕಾರ್ಡ್ ಹಾಗೂ ಮಾರ್ಕ್ಸ್ ಕಾರ್ಡ್ ನೀಡುವಂತೆ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಗುಂಪು ಶಿಕ್ಷಕನ ಮೇಲೆ ಹಲ್ಲೆ ನಡೆಸಿದೆ. ಬಂಕ್ ಮಾಲೀಕ ದೇವರಾಜ್ ಬರುವವರೆಗೂ ಬೈಕ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎನ್ನಲಾಗ್ತಿದೆ.
ಇದಾದ ಬಳಿಕ ಮಾಲೀಕ ದೇವರಾಜ್ ಸ್ಥಳಕ್ಕೆ ಬಂದು ವಿಚಾರಿಸಿದ್ದಾನೆ. ಆತನೂ ಕೂಡ ಶಿಕ್ಷಕನ ಮೇಲೆ ಏಕಾಏಕಿ ದಾಳಿ ಮಾಡಿ ಥಳಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳದಿಂದ ತಪ್ಪಿಸಿಕೊಂಡ ಶಿಕ್ಷಕ ಬ್ಯಾಟರಾಯನಪುರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಶಿಕ್ಷಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ:ರಾಯಚೂರಲ್ಲಿ ಕಲುಷಿತ ನೀರು ಕುಡಿದು 60ಕ್ಕೂ ಹೆಚ್ಚು ಜನ ಅಸ್ವಸ್ಥ!