ಬೆಂಗಳೂರು :ಲಾಕ್‌ಡೌನ್ ಭವಿಷ್ಯದ ಬಗ್ಗೆ ಚರ್ಚಿಸಬೇಕಾಗಿದ್ದ ಇಂದಿನ ಮಹತ್ವದ ಟಾಸ್ಕ್ ಫೋರ್ಸ್ ಸಭೆ ಅರ್ಧಕ್ಕೆ ಮೊಟಕುಗೊಂಡಿತು. ವಿಧಾನಸೌಧದಲ್ಲಿಂದು ಒಂದು ವಾರದ ಬೆಂಗಳೂರು ಲಾಕ್‌ಡೌನ್ ಪರಿಣಾಮ, ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕುವಲ್ಲಿ ಲಾಕ್‌ಡೌನ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ, ಲಾಕ್‌ಡೌನ್ ಭವಿಷ್ಯ ಎಲ್ಲದರ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಮಹತ್ವದ ಟಾಸ್ಕ್ ಫೋರ್ಸ್ ಸಭೆ ನಿಗದಿಯಾಗಿತ್ತು. ಆದರೆ, ಟಾಸ್ಕ್ ಫೋರ್ಸ್ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಟಾಸ್ಕ್ ಫೋರ್ಸ್ ಸಭೆ ಅರ್ಧಕ್ಕೆ ಮೊಟಕು ಕಾವೇರಿ ನಿವಾಸದಲ್ಲಿ ವಲಯವಾರು ಸಚಿವರ ಜೊತೆ ನಡೆಯುವ ಸಭೆಯಲ್ಲಿ ಭಾಗಿಯಾಗಲು ಟಾಸ್ಕ್ ಫೋರ್ಸ್ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದರು. ಹೀಗಾಗಿ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಸಭೆ ಅಪೂರ್ಣವಾಗಿದ್ದು, ನಾಳೆ ಸಭೆಯನ್ನು ಮುಂದುವರಿಸುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಆ ಮೂಲಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕಾಗಿದ್ದ ಕಾರ್ಯಪಡೆ ಸಭೆಯನ್ನು ಕಾಟಾಚಾರಕ್ಕೆ ನಡೆಸಿದಂತಾಗಿದೆ. ಸಭೆ ಸೇರಿದ ಅರ್ಧ ತಾಸಿಗೆ ಸಭೆಯನ್ನು ಮೊಟಕುಗೊಳಿಸಿ ಟಾಸ್ಕ್ ಫೋರ್ಸ್ ಸದಸ್ಯರು ಕಾವೇರಿ ನಿವಾಸಕ್ಕೆ ತೆರಳಿದರು. ಇಂದು ಕಾರ್ಯಪಡೆ ಸಭೆಯಲ್ಲಿ ಒಂದು ವಾರದ ಲಾಕ್ಡೌನ್ನಲ್ಲಿ ಪತ್ತೆಯಾದ ಕೊರೊನಾ ಪ್ರಕರಣ, ಪ್ರಕರಣದಲ್ಲಿನ ಹೆಚ್ಚಳ, ಈ ಎಲ್ಲಾ ಅಂಕಿಅಂಶಗಳ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಒಂದು ವಾರದ ಲಾಕ್‌ಡೌನ್‌ನಿಂದ ಬೆಂಗಳೂರು ಮತ್ತು ರಾಜ್ಯದಲ್ಲಿನ ಕೋವಿಡ್-19 ಸ್ಥಿತಿಗತಿ ಬಗ್ಗೆ ಸಿಎಂಗೆ ವರದಿಯನ್ನು ನೀಡಬೇಕಾಗಿತ್ತು.
ಆಯುರ್ವೇಧ ಔಷಧಿ ಬಳಕೆ ಬಗ್ಗೆ ಚರ್ಚೆ :ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧ ನೀಡುವ ಬಗ್ಗೆನೂ ಕಾರ್ಯಪಡೆ ಸಭೆಯಲ್ಲಿ ಚರ್ಚೆ ನಡೆಸಬೇಕಾಗಿತ್ತು. ಈ ಸಂಬಂಧ ಚರ್ಚೆ ನಡೆಸಲು ಆಯುರ್ವೇಧ ವೈದ್ಯ ಡಾ.ಗಿರಿಧರ್ ಕಜೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು ಸಾವಿರ ಸೋಂಕಿತರಿಗೆ ಆಯುರ್ವೇಧ ಔಷಧ ನೀಡುವ ಸಂಬಂಧ ಪ್ರಸ್ತಾಪ ಇದೆ. ಈ ನಿಟ್ಟಿನಲ್ಲಿ ತಜ್ಞರ ಜೊತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಇನ್ನು, ನಾಳೆ ಮತ್ತೆ ಕಾರ್ಯಪಡೆ ಸಭೆ ಸೇರಲಿದ್ದು, ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಿದ್ದಾರೆ.