ಬೆಂಗಳೂರು: ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ತಾರಾ ಅನುರಾಧ ಇಂದು ಮಲ್ಲೇಶ್ವರಂ ಅರಣ್ಯ ಇಲಾಖೆ ಆವರಣದಲ್ಲಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮತನಾಡಿದ ಅವರು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಸ್ಥಾನ ಅಲಂಕರಿದ್ದೇನೆ. ಇದು ನನಗೆ ಹೊಸ ಜವಾಬ್ದಾರಿಯಾಗಿದ್ದು, ನಾನು ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಿಗೆ ಚಿರ ಋಣಿಯಾಗಿದ್ದೇನೆ. ಅಣ್ಣನಂತಿರುವ ಸಚಿವರಾದ ಆನಂದ್ ಸಿಂಗ್ ಅವರ ಇಲಾಖೆಯಲ್ಲಿ ಕೆಲಸ ಮಾಡುವುದು ಹೆಮ್ಮೆಯ ವಿಷಯ. ರೇವಣಪ್ಪ ಉಪಾಧ್ಯಕ್ಷರಾಗಿದ್ದಾರೆ. ನಿರ್ದೇಶಕರನ್ನು ಈಗಾಗಲೇ ಸರ್ಕಾರ ನೇಮಿಸಿದ್ದು, ಆಯುಕ್ತರಾದ ಮಧು ಶರ್ಮ ಹಲವಾರು ಮಾಹಿತಿಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ ಎಂದರು.
ನಿಗಮದ ಸೀಮಿತ ಚೌಕಟ್ಟಿನಲ್ಲಿ ಉತ್ತಮ್ಮ ಕೆಲಸ ಮಾಡುವುದಕ್ಕೆ ಪ್ರಯತ್ನಿಸುತ್ತೇನೆ. ಈ ನಿಗಮವು ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ್ದು, ನೀಲಗಿರಿ, ರಬ್ಬರ್ ಬೆಳೆಗಳಿಗೆ ಸಂಬಂಧಿಸಿದ ಕಾರ್ಖಾನೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಕೊರೊನಾ ಹಿನ್ನೆಲೆ ನಿಗಮವು ಹಣಕಾಸಿನ ವಿಚಾರದಲ್ಲಿ ಸೊರಗಿದ್ದು, ಹಣಕಾಸು ಸಮಸ್ಯೆಯನ್ನು ಹೇಗೆ ನಿವಾರಿಸಬೇಕು ಎಂಬುದು ನಮ್ಮ ಮೊದಲ ಗುರಿಯಾಗಿದೆ ಎಂದರು.