ಕರ್ನಾಟಕ

karnataka

ETV Bharat / city

ಇತ್ತ ಮೇಕೆದಾಟು ಯೋಜನೆಗೆ ಅಡ್ಡಿ: ಅತ್ತ ರಾಜ್ಯದ ಸಮ್ಮತಿ ಇಲ್ಲದೆ ಮೂರು ಯೋಜನೆಗಳಿಗೆ ಕೈ ಹಾಕಿದ ತಮಿಳುನಾಡು! - ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

ಮೇಕೆದಾಟು ಯೋಜನೆಗೆ ತೀವ್ರ ಅಡ್ಡಿಪಡಿಸುತ್ತಿರುವ ತಮಿಳುನಾಡು, ಅದೇ ಕಾವೇರಿ ನದಿ ಪಾತ್ರದಲ್ಲಿ ಕರ್ನಾಟಕ ರಾಜ್ಯದ ಅನುಮತಿ ಇಲ್ಲದೇ ಮೂರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ತಮಿಳುನಾಡು
ತಮಿಳುನಾಡು

By

Published : Jul 6, 2021, 2:54 AM IST

Updated : Jul 6, 2021, 6:54 AM IST

ಬೆಂಗಳೂರು: ರಾಜ್ಯದ ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆಯಿಂದ ನಮ್ಮ ಪಾಲಿನ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಆಕ್ಷೇಪಿಸುತ್ತಿರುವ ಅದೇ ತಮಿಳುನಾಡು, ತಮ್ಮ ರಾಜ್ಯದಲ್ಲಿ ಕಾವೇರಿ ನದಿ‌ ಪಾತ್ರದಲ್ಲಿ ಸೈಲೆಂಟಾಗಿ ಕೆಲ ಯೋಜನೆಗಳನ್ನು ಅನುಷ್ಟಾನಗೊಳಿಸಲು ಮುಂದಾಗಿದೆ.

ಮೇಕೆದಾಟು ಯೋಜನೆ ಸದ್ಯ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಸಿಎಂ ಯಡಿಯೂರಪ್ಪ ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದ್ದು, ಸಹಕಾರ ನೀಡುವಂತೆ ಪತ್ರದ ಮೂಲಕ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದಾರೆ. ಆದರೆ, ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಇದೀಗ ಸಿಎಂ ಯಡಿಯೂರಪ್ಪಗೆ ಪತ್ರ ಬರೆದು ಯೋಜನೆ ಕೈ ಬಿಡುವಂತೆ ಒತ್ತಾಯಿಸಿದೆ. ಇದರಿಂದ ಮೇಕೆದಾಟು ಯೋಜನೆ ಸಂಬಂಧ ಎರಡೂ ರಾಜ್ಯಗಳ ಮಧ್ಯೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಅನುಷ್ಠಾನ ಶತಃಸಿದ್ಧ ಎಂದು ಪಣತೊಟ್ಟಿದೆ.

ಮೇಕೆದಾಟು ಯೋಜನೆಗೆ ತೀವ್ರ ಅಡ್ಡಿಪಡಿಸುತ್ತಿರುವ ತಮಿಳುನಾಡು, ಅದೇ ಕಾವೇರಿ ನದಿ ಪಾತ್ರದಲ್ಲಿ ಕರ್ನಾಟಕ ರಾಜ್ಯದ ಅನುಮತಿ ಇಲ್ಲದೇ ಮೂರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆ ಮೂಲಕ ಕರ್ನಾಟಕಕ್ಕೆ ಸೆಡ್ಡು ಹೊಡೆಯುತ್ತಿದೆ. ಇತ್ತ ಕರ್ನಾಟಕ ಸರ್ಕಾರ ತಮಿಳುನಾಡು ಸರ್ಕಾರ ಕೈಗೊಳ್ಳುತ್ತಿರುವ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. (ಮೇಕೆದಾಟು ಯೋಜನೆಗೆ ನೂರೆಂಟು ವಿಘ್ನ: ಯೋಜನೆ ಸುಗಮ ಅನುಷ್ಠಾನಕ್ಕೆ ಉಳಿದಿರುವ ಅಡೆತಡೆಗಳೇನು?)

ತಮಿಳುನಾಡಿನ ವಿವಾದಿತ ಯೋಜನೆಗಳು ಯಾವವು?:

ತಮಿಳುನಾಡು ಸರ್ಕಾರ ಕಾವೇರಿ ನದಿ ಪಾತ್ರದಲ್ಲಿ ಎರಡು ಜಲ ವಿದ್ಯುತ್ ಸ್ಥಾವರ ಸ್ಥಾಪಿಸಲು ಯೋಜಿಸಿದೆ. ಕುಂದ್ಹ ಪಂಪ್ಡ್ ಸ್ಟೋರೇಜ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆ ಹಾಗೂ ಸಿಳ್ಳಹಳ್ಳ ಪಂಪ್ಡ್ ಸ್ಟೋರೇಜ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯನ್ನು ಅನುಷ್ಠಾನಗೊಳಿಸಲು ಹೊರಟಿದೆ.

ಕುಂದ್ಹ ಹೈಡ್ರೋ ಎಲೆಕ್ಟ್ರಿಕ್ ಯೋಜನೆ 1890 ಕೋಟಿ ರೂ.‌ ವೆಚ್ಚದ ಯೋಜನೆಯಾಗಿದೆ. 4×124 MW ಸಾಮರ್ಥ್ಯದ ಈ ಯೋಜನೆಯನ್ನು ಎರಡು ಪ್ಯಾಕೇಜ್​ಗಳಲ್ಲಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಹಾಗೂ ಅರಣ್ಯ ಇಲಾಖೆ ಫೆ.12, 2021ರಂದು ಅನುಮತಿ ನೀಡಿದೆ.

ಇನ್ನು ಸಿಳ್ಳಹಳ್ಳದಲ್ಲಿ ಮತ್ತೊಂದು ಹೈಡ್ರೋ ಎಲೆಕ್ಟ್ರಿಕ್ ಯೋಜನೆಗೆ ತಮಿಳುನಾಡು ಯೋಜಿಸಿದೆ. 4×250MW ಸಾಮರ್ಥ್ಯದ 4,172 ಕೋಟಿ ರೂ. ವೆಚ್ಚದ ಈ ಯೋಜನೆ ಸಂಬಂಧ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯ Expert Appraisal Committee (EAC) ಪರಿಶೀಲನೆ ನಡೆಸುತ್ತಿದೆ. ಕಾವೇರಿ ನದಿ‌ ಪಾತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಈ ಎರಡೂ ಯೋಜನೆಗಳ ಸಂಬಂಧ ತಮಿಳುನಾಡು ಸರ್ಕಾರ ಕರ್ನಾಟಕದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ.‌ ಜೊತೆಗೆ ರಾಜ್ಯದ ಸಮ್ಮತಿಯನ್ನೂ ಪಡೆದಿಲ್ಲ. ಈ ಎರಡೂ ಯೋಜನೆಗಳಿಗೆ ಪರಿಸರವಾದಿ ಹಾಗೂ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. (ತಮಿಳುನಾಡು ಆಕ್ಷೇಪಿಸಿದರೂ ಮೇಕೆದಾಟು ಯೋಜನೆ ಪ್ರಾರಂಭಿಸಲಾಗುತ್ತದೆ: ಸಿಎಂ ಕಚೇರಿ ಸ್ಪಷ್ಟನೆ)

ನದಿ ಜೋಡಣೆ ಯೋಜನೆಗೆ ತಯಾರಿ:

ಇತ್ತ ತಮಿಳುನಾಡು ನಿಗದಿಗಿಂತ ಹೆಚ್ಚಿನ ಕಾವೇರಿ ನೀರನ್ನು ಬಳಸಿಕೊಂಡು ನದಿ ಜೋಡಣೆ ಯೋಜನೆಯನ್ನು ಪ್ರಾರಂಭಿಸಲು ಹೊರಟಿದೆ. ತಮಿಳುನಾಡು ಕೈಗೆತ್ತಿಗೊಳ್ಳುತ್ತಿರುವ ಕಾವೇರಿ-ದಕ್ಷಿಣ ವೆಲ್ಲಾರ್ ನದಿ ಜೋಡಣೆ ಯೋಜನೆಗೆ ಕರ್ನಾಟಕ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.

ಕಾವೇರಿಯ ಹೆಚ್ಚುವರಿ ನೀರನ್ನು 262.19 ಕಿ.ಮೀ ಕಾಲುವೆ ಮೂಲಕ ಕೊಂಡೊಯ್ಯುವ ಈ ಯೋಜನೆಗೆ 6,941 ಕೋಟಿ ವೆಚ್ಚವಾಗಲಿದೆ. ಸುಮಾರು 6,000 ಕ್ಯುಸೆಕ್ ನೀರನ್ನು ಕೊಂಡೊಯ್ಯುವ ಕಾಲುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ರಾಜ್ಯದ ಕಾನೂನು ಹೋರಾಟ ಹೇಗಿದೆ?:

ಯೋಜನೆಯ ಬಗ್ಗೆ ಕರ್ನಾಟಕ ಸರ್ಕಾರ ಫೆಬ್ರವರಿ 17ರಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ, ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಬರೆದ ಪತ್ರಗಳಲ್ಲಿ ರಾಜ್ಯದ ಆಕ್ಷೇಪಣೆಯನ್ನು ತಿಳಿಸಲಾಗಿದೆ. ತಮಿಳುನಾಡಿನ ಸದರಿ ಯೋಜನೆಯು ಕಾನೂನು ಹಾಗೂ ಇತರ ಅಂಶಗಳಿಗೆ ವಿರುದ್ಧವಾಗಿದ್ದು, ಯಾವುದೇ ತೀರುವಳಿ ನೀಡದಂತೆ ಮತ್ತು ರಾಷ್ಟ್ರೀಯ ಯೋಜನೆಯೆಂದು ಘೋಷಿಸದಿರುವಂತೆ ಕೋರಿದೆ.

ಈ ಸಂಬಂಧ ಸಿಎಂ ಮಾರ್ಚ್ 1ರಂದು ಪ್ರಧಾನಮಂತ್ರಿಗಳಿಗೆ ಹಾಗೂ ಕೇಂದ್ರ ಜಲ ಶಕ್ತಿ ಸಚಿವರಿಗೆ ಪತ್ರ ಬರೆದು ತಮಿಳುನಾಡು ರಾಜ್ಯ ಕೈಗೊಂಡಿರುವ ಯೋಜನೆಯ ಬಗ್ಗೆ ರಾಜ್ಯದ ಆಕ್ಷೇಪಣೆಯನ್ನು ತಿಳಿಸಿ, ಸದರಿ ಯೋಜನೆಗೆ ಕೇಂದ್ರ ಸರ್ಕಾರವು ತೀರುವಳಿ ನೀಡಬಾರದು ಹಾಗೂ ಯೋಜನೆಯನ್ನು ಮುಂದುವರಿಸದಂತೆ ತಮಿಳುನಾಡು ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. (ಮೇಕೆದಾಟು ಯೋಜನೆ : ತಮಿಳುನಾಡು ಸಿಎಂಗೆ ಪತ್ರ ಬರೆದ ಸಿಎಂ ಬಿಎಸ್​​ವೈ)

ತಮಿಳುನಾಡು ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಉಲ್ಲಂಘನೆಯಾಗಿ ಕಾವೇರಿ ಕಣಿವೆಯ ಹೆಚ್ಚುವರಿ ನೀರಿನ ಬಳಕೆಗಾಗಿ ಯೋಜಿಸಿರುವ ಕಾವೇರಿ-ವೆಲ್ಲಾರ್ ಯೋಜನೆಯನ್ನು ಕೈಗೊಳ್ಳದಂತೆ ಕ್ರಮವಹಿಸುವ ನಿಟ್ಟಿನಲ್ಲಿ ರಾಜ್ಯ ಕಾನೂನಾತ್ಮಕವಾಗಿ ಹಾಗೂ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಕಾನೂನು ತಂಡದೊಂದಿಗೆ ಸಮಾಲೋಚಿಸುತ್ತಿದೆ.

Last Updated : Jul 6, 2021, 6:54 AM IST

ABOUT THE AUTHOR

...view details