ಕರ್ನಾಟಕ

karnataka

ತಮಿಳುನಾಡಿನ ನದಿ ಜೋಡಣೆ: ಪರಿಷತ್​ನಲ್ಲಿ ಕಾವೇರಿದ ಕಾವೇರಿ‌ ಚರ್ಚೆ

By

Published : Mar 9, 2021, 5:57 PM IST

ಬ್ರಿಟಿಷರ ಕಾಲದಿಂದಲೇ ಕಾವೇರಿ ವಿವಾದ ಇದೆ. ಬ್ರಿಟೀಷರು ಮದ್ರಾಸ​ನ್ನು ಕೇಂದ್ರಾಡಳಿತ ಪ್ರದೇಶ ಮಾಡಿಕೊಂಡ‌ ಕಾರಣ ಮೈಸೂರು ಅದರ ಅಧೀನದಲ್ಲಿ ಬಂದಿದೆ. ಹೀಗಾಗಿ ಹೆಚ್ಚು ನೀರು ಅವರ ಪಾಲಾಗಿದೆ. ತಮಿಳುನಾಡನ್ನು ಕೇಳದೆ ಕರ್ನಾಟಕದಲ್ಲಿ ಯಾವುದೇ ಯೋಜನೆ ಮಾಡಲು ಸಾಧ್ಯವಿಲ್ಲದಂತಾಗಿದೆ.

tamil-nadu-river-formation-discussed-in-vidhan-parishad-session
ವಿಧಾನ ಪರಿಷತ್

ಬೆಂಗಳೂರು: 46 ಟಿಎಂಸಿ ನೀರು ಬಳಕೆಯ ಕಾವೇರಿಗೆ ವೆಲ್ಲಾರ್ ನದಿ, ಗುಂಡಾರ್ ನದಿ ಜೋಡಣೆ ಮಾಡುವ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ಮೇಕೆದಾಟು, ಕೆಆರ್‌ಎಸ್ ಹೈಲೆವೆಲ್ ಚಾನಲ್ ಮತ್ತು ಕಬಿನಿ ಹಿನ್ನೀರಿನಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಕಾವೇರಿ ಮೇಲಿನ ನದಿ ನೀರು ಬಳಕೆಯ ಹಕ್ಕನ್ನು ರಾಜ್ಯ ಸರ್ಕಾರ ಕಳೆದುಕೊಳ್ಳಲಿದೆ ಎಂದು ಜೆಡಿಎಸ್​ನ ಶ್ರೀಕಂಠೇಗೌಡ ಆತಂಕ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಧ್ಯಾಹ್ನದ ಕಲಾಪದಲ್ಲಿ ನಿಯಮ‌ 68 ರ ಅಡಿಯಲ್ಲಿ ತಮಿಳುನಾಡು ಸರ್ಕಾರ ಕಾವೇರಿ ನದಿ ಪಾತ್ರದಲ್ಲಿನ ಮಾಯನೂರು ಜಲಾಶಯವನ್ನು ಅಕ್ರಮವಾಗಿ ಬಳಸಿಕೊಂಡಿರುವ ಬಗ್ಗೆ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನೀರಾವರಿಯಲ್ಲಿ ಕೃಷ್ಣಾ ಮತ್ತು ಕಾವೇರಿ ರಾಜ್ಯದ ಎರಡು ಕಣ್ಣುಗಳು, ಕೃಷ್ಣಾ ತಹಬದಿಗೆ ಬಂದಿದೆ 519 ಮೀಟರ್ ಇರುವ ಜಲಾಶಯದ ಮಟ್ಟವನ್ನು ಮತ್ತೆ 5 ಮೀಟರ್ ಹೆಚ್ಚಳಕ್ಕೆ ಅನುಮತಿ ಸಿಕ್ಕಿದೆ ಅದನ್ನು ಬಳಸಿಕೊಳ್ಳಬೇಕಿದೆ. ಆದರೆ ಕಾವೇರಿ ವಿಚಾರ ಮಾತ್ರ ಭಿನ್ನವಾಗಿದೆ ಎಂದರು.

ಬ್ರಿಟಿಷರ ಕಾಲದಿಂದಲೇ ಕಾವೇರಿ ವಿವಾದ ಇದೆ, ಬ್ರಿಟೀಷರು ಮದ್ರಾಸ್​ನ್ನು ಕೇಂದ್ರಾಡಳಿತ ಪ್ರದೇಶ ಮಾಡಿಕೊಂಡ‌ ಕಾರಣ ಮೈಸೂರು ಅದರ ಅಧೀನದಲ್ಲಿ ಬರುವ ಕಾರಣ ಹೆಚ್ಚು ನೀರು ಅವರ ಪಾಲಾಗಿದೆ. ತಮಿಳುನಾಡನ್ನು ಕೇಳದ ಕರ್ನಾಟಕದಲ್ಲಿ ಯಾವುದೇ ಯೋಜನೆ ಮಾಡಲು ಸಾಧ್ಯವಿಲ್ಲದಂತಾಗಿದೆ. ವಾರ್ಷಿಕ 1571 ಸೆಂಟಿಮೀಟರ್ ಮಳೆ ಕರ್ನಾಟಕದಲ್ಲಿ, 1147 ಸೆಂಟಿಮೀಟರ್ ಮಳೆ ತಮಿಳುನಾಡಿನಲ್ಲಿ ಬೀಳುತ್ತಿದೆ. ಕರ್ನಾಟಕ 425 ಟಿಎಂಸಿ, ತಮಿಳುನಾಡು 205 ಟಿಎಂಸಿ ನೀರು ಮಳೆಯಿಂದ ಸಿಗಲಿದೆ.

ಈ ವಿವಾದ ಸುಪ್ರೀಂಕೋರ್ಟ್‌ಗೆ ಹೋದಾಗ ಕರ್ನಾಟಕ 284.75, ತಮಿಳುನಾಡು 404, ಕೇರಳ 30, ಪಾಂಡಿಚೇರಿ 7 ಟಿಎಂಸಿಗೆ ನೀರು ಹಂಚಿಕೆ ಮಾಡಲಾಗಿದೆ. ಕಾವೇರಿ ಜಲಾನಯನದ ಮೇಲುಸ್ತುವಾರಿ ನಿರ್ವಹಣಾ ಮಂಡಳಿ ನಿರ್ವಹಿಸಲಿದೆ. ನಾಲ್ಕೂ ರಾಜ್ಯದ ಪ್ರತಿನಿಧಿಗಳು, ಕೇಂದ್ರದ ಪ್ರತಿನಿಧಿ ಒಳಗೊಂಡ ಕೆಲಸ ಮಾಡಲು ಸೂಚಿಸಿದೆ. ಆದರೆ ಫೆಬ್ರವರಿಯಲ್ಲಿ ರಾಜ್ಯದ ಎನ್ಒಸಿ ಪಡೆಯದೆ ನಿರ್ವಹಣಾ ಮಂಡಳಿ ಸಭೆ ಗಮನಕ್ಕೂ ತಾರದೆ ತಮಿಳುನಾಡಿನವರು ಒಂದು ಯೋಜನೆಯ ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಆರೋಪಿಸಿದರು.

14400 ಕೋಟಿ ವೆಚ್ಚದ ನದಿ ಜೋಡಣಾ ಯೋಜನೆ ಮಾಡಲಾಗುತ್ತಿದೆ. ಕಾವೇರಿಗೆ ವೆಲ್ಲಾರ್, ಗುಂಡಾರ್ ನದಿ ಜೋಡಣೆ ಮಾಡಲಿದ್ದು ಇದರಿಂದ 45 ಟಿಎಂಸಿ ಹೆಚ್ಚು ನೀರು ಬಳಸಿಕೊಳ್ಳಬಹುದಾಗಿದೆ.ಯಾರ ಅನುಮತಿ ಇಲ್ಲದೆ ನೂರಾರು ಎಕರೆಗೆ ಹೊಸದಾಗಿ ನೀರಾವರಿ ಕಲ್ಪಿಸುವ ಯೋಜನೆ ರೂಪಿಸುತ್ತಿದ್ದಾರೆ.118.45 ಕಿಲೋಮೀಟರ್ ಕಾಲುವೆ, 340 ಕೆರೆಗೆ ನೀರು, 42170 ಎಕರೆಗೆ ಖುಷ್ಕಿ ಭೂಮಿಗೆ ನೀರು ಹರಿಸುವ ಮೊದಲ ಹಂತದ ಯೋಜನೆಗೆ ಚಾಲನೆ ನೀಡಲಾಗಿದೆ. ಒಟ್ಟಾರೆಯಾಗಿ ಮೂರು ಹಂತದಲ್ಲಿ 1,09962 ಲಕ್ಷ ಎಕರಗೆ ನೀರು 1054 ಕರೆಗೆ ನೀರು ತುಂಬಿಸುವ ಯೋಜನೆ,14400 ಕೋಟಿ ವೆಚ್ಚದಲ್ಲಿ ಆರಂಭಿಸಿದ್ದ, 6948 ಕೋಟಿ ಹಣವನ್ನು ಮೊದಲ ಹಂತಕ್ಕೆ ಬಿಡುಗಡೆ ಮಾಡಲಾಗಿದೆ. ಸದ್ದಿಲ್ಲದೆ ಯೋಜನೆ ಕೈಗೆತ್ತಿಕೊಂಡಿದೆ ಎಂದು ದೂರಿದರು.

ರಾಜ್ಯದ ಹಕ್ಕು ಉಳಿಸಿಕೊಳ್ಳಲು ಮೂರು ಯೋಜನೆ

ಮೇಕೆದಾಟು: 9 ಸಾವಿರ ಕೋಟಿ ವೆಚ್ಚದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ 40 ಟಿಎಂಸಿ ನೀರು ಸಂಗ್ರಹಿಸುವ ಮೇಕೆದಾಟು ಬ್ಯಾಲೆನ್ಸಿಂಗ್ ರಿಸಾರ್ವಯರ್ ಯೋಜನೆ ಕೈಗೆತ್ತಿಕೊಳ್ಳಬೇಕು.

ಕೆಆರ್​ಎಸ್ ಹೈ ಲೆವೆಲ್ ಚಾನೆಲ್ ಪ್ರಾಜೆಕ್ಟ್: ಕೆಆರ್​ಎಸ್ ನದಿ ಪ್ರವಾಹ ತಡೆದು‌ ಹೈಲೆವೆಲ್ ಕಾಲುವೆ ಮೂಲಕ 10 ಸಾವಿರ ಕ್ಯೂಸೆಕ್ ನೀರನ್ನು ಶಿಂಷಾ, ಲೋಕಪಾವನಿ, ಅರ್ಕಾವತಿ ನದಿಗೆ ಜೋಡಣೆ ಮಾಡಬೇಕು ಇದರಿಂದ ಮೂರೂ ನದಿ ಜೀವಂತವಿಡಬಹುದು, ಕುಡಿಯುವ ನೀರು ಪೂರೈಕೆ ಮಾಡಬಹುದು, ಕೆರೆಗಳು ತುಂಬಲಿವೆ, 20 ವರ್ಷದಿಂದ ಯೋಜನೆ ಇಟ್ಟುಕೊಂಡಿದ್ದಾರೆ ಆದರೆ ಅನುಷ್ಠಾನ ಇಲ್ಲ, 3200 ಕೋಟಿ ಯೋಜನೆ ಇದಾಗಿದೆ.

ಏತ ನೀರಾವರಿ: ಕಬಿನಿ ಹಿನ್ನೀರಿನಿಲ್ಲಿ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿದೆ. ಚಾಮರಾಜನಗರಕ್ಕೆ ಕೇರಳದಿಂದ ಬರುವ ಹೆಚ್ಚುವರಿ ನೀರನ್ನು ಬಳಕೆ ಮಾಡುವ ಯೋಜನೆಯಿಂದ 1.5 ಲಕ್ಷ ಎಕರೆಗೆ ನೀರನ್ನು ಒಂದು ಬೆಳೆಗೆ ಕೊಡಬಹುದಾಗಿದೆ, ಇದು ಯಾರಿಗೂ ಅಡ್ಡಿಯಾಗದ ಯೋಜನೆ, ಪ್ರವಾಹದ ವೇಳೆ ನೀರನ್ನು ಬಳಸಿಕೊಳ್ಳಬಹುದಾದ ಯೋಜನೆಗಳಾಗಿವೆ.

ಈ ಮೂರೂ ಯೋಜನೆಗಳನ್ನು ಈಗ ಕೈಗೆತ್ತಿಕೊಳ್ಳದಿದ್ದರೆ ನಮ್ಮ ಹಕ್ಕನ್ನು ನಾವು ಕಳೆದುಕೊಳ್ಳಲಿದ್ದೇವೆ. 26 ಸಂಸದರು ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ತಮಿಳುನಾಡಿನಲ್ಲಿ ಏನೂ ಇಲ್ಲ. ಆದರೂ ಈಗ ನೀವು ಮಾಡದೇ ಇದ್ದಲ್ಲಿ ಯಾವಾಗ ಅನುಷ್ಠಾನಕ್ಕೆ ತರುತ್ತೀರಾ? ಬ್ರಿಟಿಷರ ಕಾಲದ ಅನ್ಯಾಯ ಈಗ ಮತ್ತೆ ಪುನರಾವರ್ತನೆ ಆಗುತ್ತಿದೆ, ಈ ಕೂಡಲೇ ಮೂರು ಕಾಮಗಾರಿಗೆ ಚಾಲನೆ ನೀಡಬೇಕು, ಯಾರ ಅನುಮತಿ ಪಡೆಯದೆ ಆರಂಭಿಸಬೇಕು, ಈಗಲೂ ನೀವು ಮಾಡದಿದ್ದರೆ ಜನ ಶಪಿಸುತ್ತಾರೆ ಎಂದು ಶ್ರೀಕಂಠೇಗೌಡ ಬಿಜೆಪಿಗೆ ಎಚ್ಚರಿಕೆ ನೀಡಿದರು.

ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ನಾವು ಪ್ರತಿ ತಿಂಗಳು ನೀರನ್ನು ತಮಿಳುನಾಡಿಗೆ ಬಿಡಬೇಕಿದೆ, ಸಮದ್ರಕ್ಕೆ ಸೇರುವ ನೀರನ್ನು ಮೇಕೆದಾಟಿನಲ್ಲಿ ಸಂಗ್ರಹಿಸಿಟ್ಟುಕೊಂಡಲ್ಲಿ ಅದನ್ನು ಬೇಸಿಗೆಯಲ್ಲಿ ತಮಿಳುನಾಡಿಗೆ ಹರಿಸಬಹುದಾಗಿದೆ. ಇದರಿಂದ ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಜೊತೆಗೆ ತಮಿಳುನಾಡಿಗೆ ತಿಂಗಳವಾರು ಹಂಚಿಕೆಯ ಆಧಾರದಂತೆ ನೀರು ಹರಿಸಲು ಸಹಕಾರಿಯಾಗಲಿದೆ. ಹಾಗಾಗಿ ಸರ್ಕಾರ ಕೂಡಲೇ ಮೇಕೆದಾಟು ಯೋಜನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ನೀರಾವರಿ ತಜ್ಞರು, ಸಂಸದರು,ರಾಜ್ಯಸಭೆ ಸದಸ್ಯರ ಸಭೆಯನ್ನು ಸಿಎಂ ಕರೆದು ಸಲಹೆ ತೆಗೆದುಕೊಳ್ಳಬೇಕು. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಬೇಕು, ಸರ್ವಪಕ್ಷ ನಿಯೋಗದೊಂದಿಗೆ ಸಿಎಂ ಯಡಿಯೂರಪ್ಪ, ಪ್ರಧಾನಿ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕಾಗುವ ಸಮಸ್ಯೆ ಹೇಳಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details