ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಂದ ಗುಂಡೇಟು ತಿಂದಿದ್ದ ನಟೋರಿಯಸ್ ರೌಡಿಶೀಟರ್ ನರಸಿಂಹ ರೆಡ್ಡಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಗಿರಿನಗರ ಪೊಲೀಸರಿಗೆ ಈತನೊಂದಿಗೆ ಕಳ್ಳರ ಗ್ಯಾಂಗ್ ಇರುವುದು ತಿಳಿದಿತ್ತು.
ಸತತ ಕಾರ್ಯಾಚರಣೆ ನಡೆಸಿ ಇದೀಗ ತಮಿಳುನಾಡು ಮೂಲದ ಮೂವರು ಖತರ್ನಾಕ್ ಕಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕಾರ್ತಿಕ್, ವೆಂಕಟೇಶ್ ಹಾಗೂ ಶಿವ ಬಂಧಿತ ಆರೋಪಿಗಳು.
ಕಳ್ಳತನ, ಸುಲಿಗೆ ಸೇರಿದಂತೆ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡು ಕುಖ್ಯಾತಿ ಪಡೆದಿದ್ದ ರೌಡಿ ನರಸಿಂಹ, ದೊಡ್ಡಮಟ್ಟದಲ್ಲಿ ಕಳ್ಳತನ ಮಾಡಬೇಕಾದರೆ ತಮಿಳುನಾಡಿನಿಂದ ಹುಡುಗರನ್ನು ಕರೆಸಿಕೊಳ್ಳುತ್ತಿದ್ದ.
ನರಸಿಂಹ ನೇತೃತ್ವದಲ್ಲಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಗಿರಿನಗರ, ಹೆಚ್ಎಸ್ಆರ್ ಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಾರ್ತಿಕ್, ವೆಂಕಟೇಶ್ ಹಾಗೂ ಶಿವ ಎಂಬುವರನ್ನು ಬಂಧಿಸಿ ಇವರಿಂದ 60 ಲಕ್ಷ ಮೌಲ್ಯದ 1 ಕೆಜಿ ಚಿನ್ನ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೂರು ಕಾರುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.