ಕರ್ನಾಟಕ

karnataka

ETV Bharat / city

ತಾರಕಕ್ಕೇರಿದ ಮಾಜಿ ಸಿಎಂಗಳ ಜಟಾಪಟಿ : ಇಬ್ಬರ ವಾಗ್ವಾದದ ಹಿಂದಿನ ಮರ್ಮವೇನು?

ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರ ಸದ್ಯಕ್ಕೆ ನಿಲ್ಲೋವಂತೆ ಕಾಣುತ್ತಿಲ್ಲ. ಹೆಚ್​ಡಿಕೆ- ಸಿದ್ದರಾಮಯ್ಯ ನಡುವಿನ ವಾಗ್ವಾದದ ಮರ್ಮದ ಹಿಂದೆ ವಿವಿಧ ಆಯಾಮಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಹೊರ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ..

Talk war between siddaramaiah and kumaraswamy continues
Talk war between siddaramaiah and kumaraswamy continues

By

Published : Sep 27, 2021, 4:09 PM IST

ಬೆಂಗಳೂರು :ಜಾತಿ ಜನಗಣತಿ ಹಾಗೂ ಅನ್ನಭಾಗ್ಯ ಅಕ್ಕಿ ವಿತರಣೆ ಯೋಜನೆ ಕುರಿತಂತೆ ಮಾಜಿ ಮುಖ್ಯಮಂತ್ರಿಗಳ ಮಾತಿನ ಜಟಾಪಟಿ ಈಗ ತಾರಕಕ್ಕೇರಿದೆ. ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ತೊಡಗಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ನಡೆದ ವಿಧಾನಸಭೆ ಕಲಾಪದಲ್ಲೂ ಅಕ್ಕಿ ವಿಚಾರದಲ್ಲಿ ಇಬ್ಬರೂ ನಾಯಕರು ವಾಗ್ವಾದಕ್ಕಿಳಿದಿದ್ದರು. ಅಲ್ಲಿಂದ ಆರಂಭವಾದ ಮಾತಿನ ಸಮರ ಇನ್ನೂ ನಿಂತಿಲ್ಲ. ಜಾತಿಗಣತಿ ವಿಚಾರವನ್ನು ಸಿದ್ದರಾಮಯ್ಯ ಮತ್ತೆ ಮತ್ತೆ ಎಳೆದು ತರುತ್ತಿದ್ದು, ತಮ್ಮ ಅಭಿಪ್ರಾಯವನ್ನು ಒಂದು ವರ್ಗಕ್ಕೆ ಮುಟ್ಟಿಸುವ ಪ್ರಯತ್ನದ ಧಾವಂತ ತೋರುತ್ತಿದ್ದಾರೆ.

ಈ ವಿಚಾರದಲ್ಲಿ ಕುಮಾರಸ್ವಾಮಿಯವರ ಮೇಲೆ ಗಂಭೀರ ಆರೋಪ ಹೊರಿಸುತ್ತಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾತಿಗಣತಿ ವರದಿ ಸ್ವೀಕರಿಸಲಿಲ್ಲ. ಅಂದು ಸಚಿವರಾಗಿದ್ದ ಪುಟ್ಟರಂಗಶೆಟ್ಟಿಯವರನ್ನು ವರದಿ ಸ್ವೀಕರಿಸದಂತೆ ಅಂದು ಸಿಎಂ ಆಗಿದ್ದ ಹೆಚ್ ​ಡಿ ಕುಮಾರಸ್ವಾಮಿ ಹೆದರಿಸಿದ್ದರು ಎಂದು ಪದೇಪದೆ ಹೇಳುತ್ತಿದ್ದಾರೆ.

ಇದನ್ನೂ ಓದಿ:ಕುಮಾರಸ್ವಾಮಿ ಸುಳ್ಳು ಬಿಟ್ಟು ಬೇರೇನೂ ಹೇಳೋದಿಲ್ಲ: ಸಿದ್ದರಾಮಯ್ಯ

ತಮ್ಮ ಮೇಲೆ ಎರಗಬಹುದಾದ ಸಂಭಾವ್ಯ ಒತ್ತಡದಿಂದ ರಕ್ಷಿಸಿಕೊಳ್ಳಲು ಸಿದ್ದರಾಮಯ್ಯ ಗುರಾಣಿಯಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಜಾತಿಗಣತಿಯಿಂದ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ದೊಡ್ಡ ವರ್ಗವು ತಮ್ಮನ್ನು ಮುಂದಿನ ಚುನಾವಣೆ ವೇಳೆ ಕಡೆಗಣಿಸಿಬಿಡಬಹುದೆಂಬ ಲೆಕ್ಕಾಚಾರದಲ್ಲಿ ಈ ಹೇಳಿಕೆ ಬರುತ್ತಿದೆ ಎಂಬ ಮಾತೂ ಇದೆ.

ಕುಮಾರಸ್ವಾಮಿ ಅವರು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಸುಳ್ಳು ಹೇಳೋದು ಬಿಟ್ಟು ಅವರಿಗೆ ಬೇರೆ ಗೊತ್ತಿಲ್ಲ ಎಂದು ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅವರು ಹೆಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು ಜೆಡಿಎಸ್ ಜತೆ ಗುರುತಿಸಿಕೊಂಡ ಹಿಂದುಳಿದ, ದಲಿತ ಸಮುದಾಯಗಳಲ್ಲಿ ವ್ಯತಿರಿಕ್ತ ಅಭಿಪ್ರಾಯ ಮೂಡಿಸುವ ಹುನ್ನಾರವೇ? ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: 'ಸುಳ್ಳಿನ ಶೂರ ಸಿದ್ದರಾಮಯ್ಯನವರಿಗೆ ರಾಜಕೀಯ ಶಕ್ತಿ ತುಂಬಿದವರು ಯಾರು?'

ಮತ್ತೊಂದೆಡೆ ಉಚಿತ ಪಡಿತರ ಅಕ್ಕಿಯ ವಿತರಣೆಯ ರಾಜಕೀಯ ಲಾಭ ಈಗಲೂ ಪಡೆಯುತ್ತಿರುವ ಸಿದ್ದರಾಮಯ್ಯರನ್ನು ಕೆಣಕಿರುವ ಕುಮಾರಸ್ವಾಮಿ ಅವರು, 5ಕೆಜಿ ಅಕ್ಕಿಯಿಂದ 7 ಕೆಜಿಗೆ ಅಕ್ಕಿ ಹೆಚ್ಚಿಸುವ ಘೋಷಣೆ ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿದರೂ, ಮೈತ್ರಿ ಸರ್ಕಾರದಲ್ಲಿ ಅಕ್ಕಿ ವಿತರಿಸಲು ಹಣ ಹೊಂದಾಣಿಕೆಗೆ ತಾವು ಕಷ್ಟ ಪಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಎದುರೇಟು :ಜಾತಿಗಣತಿ ವರದಿ ಪರವಾಗಿ ತಮ್ಮ ಪಕ್ಷದಲ್ಲಿ ತಮಗೆ ಬೀಳುತ್ತಿರುವ ಏಟುಗಳ ಹೊಡೆತ ತಾಳಲಾಗದೆ ಬಹಿರಂಗವಾಗಿ ಹೊಡೆಯುವುದು ರಾಜಕೀಯ ಅವಕಾಶವಾದಿತನವಷ್ಟೇ.. ಮುಖ್ಯಮಂತ್ರಿ ಆಗಿದ್ದವರು, ಈಗ ಪ್ರತಿಪಕ್ಷದ ನಾಯಕರೂ ಆಗಿರುವ ರಾಜ್ಯ ಪಂಡಿತರಿಗೆ ಹೇಳಿಕೆ ನೀಡುವ ಮುನ್ನ ಆ ಬಗ್ಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು. ಅಕ್ಕಿ ವಿತರಣೆಯ ವಿಚಾರದಲ್ಲಿ ನಿಮ್ಮ 'ಸುಳ್ಳಿನ ಜಪ' ಮುಂದುವರಿದಿದೆ.

ಸತ್ಯ ಹೇಳಲು ಹಿಂಜರಿಕೆ-ಅಧೈರ್ಯ ಏಕೆ? ಸುಳ್ಳಿನ ಮೇಲಿರುವಷ್ಟು ನಿಷ್ಠೆ ಸತ್ಯದ ಮೇಲೆ ಯಾಕಿಲ್ಲ?. ಚುನಾವಣೆಯಲ್ಲಿ ಕೇವಲ ಮತ ಪಡೆಯುವ ದುರುದ್ದೇಶದಿಂದ ನೀವು ಜನರು ತಿನ್ನುವ ಅನ್ನದ ಜತೆಗೂ ರಾಜಕೀಯ ಮಾಡುತ್ತಿದ್ದೀರಿ. ಪಾಪಪ್ರಜ್ಞೆ ಇಲ್ಲವಾ ನಿಮಗೆ? ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯಗೆ ಎದುರೇಟು ನೀಡಿದ್ದಾರೆ.

ಹೆಚ್​ಡಿಕೆ-ಸಿದ್ದರಾಮಯ್ಯ ನಡುವಿನ ವಾಗ್ವಾದದ ಮರ್ಮದ ಹಿಂದೆ ವಿವಿಧ ಆಯಾಮಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಹೊರ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details