ಬೆಂಗಳೂರು :ರಾಜ್ಯ ಸರ್ಕಾರದ ವಿರುದ್ಧದಶೇ.40ರಷ್ಟು ಕಮಿಷನ್ ಆರೋಪ ಕುರಿತ ನಿಲುವಳಿ ಸೂಚನೆ ನೋಟಿಸ್ ತಿರಸ್ಕಾರವಾದ ವಿಷಯವು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷದ ನಡುವೆ ಜಟಾಪಟಿಗೆ ಕಾರಣವಾಯಿತು. ನಿಲುವಳಿ ನೋಟಿಸ್ ತಿರಸ್ಕಾರ ಮಾಡಿದ್ದ ಸ್ಪೀಕರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಈಗ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಕಮಿಷನ್ ಆರೋಪದ ಬಗ್ಗೆ ಚರ್ಚೆ ನಡೆಸಲು ನಾನು ಬೆಳಗಾವಿ ಅಧಿವೇಶನದ ವೇಳೆ ನಿಲುವಳಿ ಸೂಚನೆ ಕೊಟ್ಟಿದ್ದೇನೆ. ಅದು ಆಗಲಿಲ್ಲ. ಗುತ್ತಿಗೆದಾರರು ಯಾವ ಕಾಲದಲ್ಲೂ ಶೇ.40ರಷ್ಟು ಕಮಿಷನ್ ಬಗ್ಗೆ ಪತ್ರ ಬರೆದಿರಲಿಲ್ಲ. ಇದು ದಿನಾ ನಡೆಯುವ ಅವ್ಯವಹಾರವಾಗಿದೆ. ಆದರೆ, ಇದನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿ ಕೊಡುತ್ತಿಲ್ಲ ಎಂದು ವಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ನಾನು ಜನರ ಪರವಾಗಿ ಮಾತನಾಡುತ್ತಿದ್ದೇನೆ. ಇದರ ಬಗ್ಗೆ ಸಮಗ್ರ ಚರ್ಚೆ ಮಾಡಬೇಕು. ಇದನ್ನೆಲ್ಲಾ ನಾವು ನೋಡಿಕೊಂಡು ಇರಬೇಕಾ?. ಅದು ಜನರ ಬೆವರ ಹಣವಾಗಿದೆ. ಅದರ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬೊಮ್ಮಾಯಿ, ನಾವು ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆನೇ ಇಲ್ಲ.
ರಾಜ್ಯದಲ್ಲಿ ಏನಾಗಿದೆ?, ಏನಾಗುತ್ತದೆ ಎಂಬುದರ ಬಗ್ಗೆ ತನಿಖೆ ಆಗಬೇಕು. ಗುತ್ತಿಗೆದಾರರು ಪತ್ರ ಏಕೆ ಬರೆದರು, ಯಾರ ಚಿತಾವಣೆಯಲ್ಲಿ ಬರೆದರು ಎಂಬ ಬಗ್ಗೆ ತನಿಖೆ ನಡೆಯಬೇಕು. ಅದು ಆಧಾರರಹಿತ ಪತ್ರವಾಗಿದೆ. ಅದರಲ್ಲಿ ಯಾವುದೇ ಆಧಾರ ಇಲ್ಲ ಎಂದರು. ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಚರ್ಚೆ ಮಾಡಲು ಯಾವುದೇ ತಕರಾರಿಲ್ಲ.