ಬೆಂಗಳೂರು:ಭಾನುವಾರ ಭಾರತ-ದ.ಆಫ್ರಿಕಾ ನಡುವೆ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದೆ. ಕ್ರಿಕೆಟ್ ನೋಡಿ ಹೊರಗೆ ಬಂದ ಮೇಲೆ ಹೇಗಾಪ್ಪಾ ಮನೆಗೆ ಹೋಗೋದು? ಅನ್ನೋ ಟೆನ್ಷನ್ ಬೇಡವೇ ಬೇಡ. ಯಾಕೆಂದರೆ ನಿಮಗಾಗಿ 'ನಮ್ಮ ಮೆಟ್ರೋ' ರೈಲು ಓಡಾಟದ ಸಮಯವನ್ನು ವಿಸ್ತರಿಸಿದೆ.
ಟಿ-20 ಕ್ರಿಕೆಟ್ ನೋಡಿ ಬಂದ್ಮೇಲೆ ಹೆದರಬೇಡಿ: ಮನೆ ತಲುಪಿಸಲಿದೆ 'ನಮ್ಮ ಮೆಟ್ರೋ' - ಬೆಂಗಳೂರಲ್ಲಿ ಐಸಿಸಿ ಟಿ-20 ಕ್ರಿಕೆಟ್ ಪಂದ್ಯ
ಬೆಂಗಳೂರಲ್ಲಿ ಭಾನುವಾರ ಭಾರತ- ದಕ್ಷಿಣ ಆಪ್ರಿಕಾ ಮಧ್ಯೆ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ, ರೈಲು ಓಡಾಟದ ಸಮಯ ವಿಸ್ತರಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು, ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ ಹಾಗೂ ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಿಂದ ಕ್ರಮವಾಗಿ ವಾಣಿಜ್ಯ ಸಂಚಾರ ಸೇವೆಯನ್ನು ರಾತ್ರಿ 11:30 ಗಂಟೆಯವರೆಗೆ ವಿಸ್ತರಿಸಿದೆ. ಕೊನೆಯ ರೈಲು ಸಂಚಾರವು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ನಿಂದ ರಾತ್ರಿ 11-45 ಗಂಟೆಯ ವರೆಗೆ ನಾಲ್ಕು ದಿಕ್ಕುಗಳಲ್ಲಿ ಲಭ್ಯವಿರುತ್ತದೆ. ಐಸಿಸಿ ಟಿ20 ಪಂದ್ಯಾವಳಿಯ ಸಮಯದಲ್ಲಿ ನಾಳೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಲಭ್ಯವಿರುತ್ತದೆ.
ಪಂದ್ಯಾವಳಿಯ ನಂತರ ರಾತ್ರಿ 10 ಗಂಟೆಯಿಂದ ವಿಸ್ತರಿಸಲಾದ ಕಾಲಾವಧಿಯವರೆಗೆ, ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಹಿಂದಿರುಗಲು ಪೇಪರ್ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ಬಳಸಬಹುದಾಗಿದೆ. ಇನ್ನು ಟೋಕನ್‌ಗಳನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 10 ಗಂಟೆಯ ನಂತರ ಮಾರಾಟ ಮಾಡಲಾಗುವುದಿಲ್ಲ ಅಂತ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಯಾಣಿಕರು ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ನಮ್ಮ ಮೆಟ್ರೋ ಮನವಿ ಮಾಡಿದೆ.