ಬೆಂಗಳೂರು:ಕಳೆದ ಮೂರು ವರ್ಷದಲ್ಲಿ ನಾಲ್ಕನೇ ಮುಖ್ಯಮಂತ್ರಿಯನ್ನು ಕಾಣುತ್ತಿರುವ ರಾಜ್ಯದಲ್ಲಿ, ಪ್ರಸಕ್ತ ವಿಧಾನಸಭೆ ಅವಧಿಯಲ್ಲೇ ಮೂರನೇ ಬಾರಿ ಏಕ ವ್ಯಕ್ತಿ ಸರ್ಕಾರ ರಚನೆಯಾಗುತ್ತಿರುವುದು ವಿಶೇಷ.
ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಇಂದು ಒಬ್ಬರೇ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಏಕ ವ್ಯಕ್ತಿಯ ಕ್ಯಾಬಿನೆಟ್ ರಚನೆಯಾಗುತ್ತಿದೆ. ಈ ಹಿಂದೆ 2018ರಲ್ಲಿ ಮೂರು ದಿನ ಅಧಿಕಾರ ನಡೆಸಿದ್ದ ಯಡಿಯೂರಪ್ಪ, ಆಗಲೂ ಒಬ್ಬರೇ ಪ್ರಮಾಣವಚನ ಸ್ವೀಕಾರ ಮಾಡಿದ್ದರು.
ನಂತರ ರಚನೆಯಾಗಿದ್ದು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ. ಈ ಸರ್ಕಾರ ರಚನೆಗೊಂಡ ಒಂದು ವರ್ಷದಲ್ಲೇ ಪತನಗೊಂಡಾಗ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಿ 2019ರ ಜುಲೈ 26ರಂದು ಮತ್ತೆ ಯಡಿಯೂರಪ್ಪ ಒಬ್ಬರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ಚೀಕಾರ ಮಾಡಿದ್ದರು.
ಅಂದು ಕೂಡ ಏಕ ವ್ಯಕ್ತಿಯ ಸರ್ಕಾರ, ಕ್ಯಾಬಿನೆಟ್ ರಚನೆಯಾಗಿತ್ತು. ಅದಾಗಿ ಎರಡು ವರ್ಷದ ನಂತರ 2021ರ ಜುಲೈ 28ರಂದು ಮತ್ತೆ ಇತಿಹಾಸ ಮರುಕಳಿಸಿದ್ದು, ಬಸವರಾಜ ಬೊಮ್ಮಾಯಿ ಒಬ್ಬರೇ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಈ ಮೂಲಕ ಮೂರನೇ ಬಾರಿ ಏಕ ವ್ಯಕ್ತಿಯ ಸರ್ಕಾರ ಮತ್ತು ಕ್ಯಾಬಿನೆಟ್ ರಚನೆಯಾಗುತ್ತಿದೆ.
ಪ್ರಸಕ್ತ ವಿಧಾನಸಭೆಯಲ್ಲಿ ಬಿಜೆಪಿಯಿಂದ ಒಟ್ಟು ಮೂರನೇ ಬಾರಿ ಸಿಎಂ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದ್ದು, ಮೂರೂ ಬಾರಿಯೂ ಏಕ ವ್ಯಕ್ತಿಯ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿರುವುದು ವಿಶೇಷ.
2018ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಐದು ವರ್ಷದ ಅವಧಿಯಲ್ಲಿ ಮೂರು ವರ್ಷ ಮುಗಿದಿದ್ದು, ನಾಲ್ಕು ಬಾರಿ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ನಡೆದಿದೆ. 2018ರಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರೆ, 2019ರಲ್ಲಿ ಯಡಿಯೂರಪ್ಪ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.
ಇದೀಗ 2021ರಲ್ಲಿ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದು, ಕಳೆದ ಮೂರು ವರ್ಷದಲ್ಲಿ ನಾಲ್ಕನೇ ಮುಖ್ಯಮಂತ್ರಿ ರಾಜ್ಯದಲ್ಲಿ ಅಧಿಕಾರ ಸ್ವೀಕಾರ ಮಾಡಿದಂತಾಗುತ್ತಿದೆ.
ನಾಲ್ಕು ಬಾರಿ ಪ್ರಮಾಣ ವಚನ:
ರಾಜಭವನದಲ್ಲಿ ಕಳೆದ ಮೂರು ವರ್ಷದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ. ಮೂರು ಬಾರಿ ವಾಜುಭಾಯ್ ವಾಲಾ ಪ್ರತಿಜ್ಞಾ ವಿಧಿ ಬೋಧನೆ ಮಾಡಿದ್ದು, ಈ ಬಾರಿ ಹೊಸ ರಾಜ್ಯಪಾಲರು ಹೊಸ ಮುಖ್ಯಮಂತ್ರಿಗೆ ಪ್ರಮಾಣವಚನ ಬೋಧನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ನಿಯೋಜಿತ ಸಿಎಂ ಮನೆಗೆ ಭಾರಿ ಭದ್ರತೆ: ಪ್ರಮಾಣ ವಚನಕ್ಕೂ ಮುನ್ನ ದೇವರ ದರ್ಶನ ಪಡೆದ ಬೊಮ್ಮಾಯಿ