ಬೆಂಗಳೂರು: ಕಟ್ಟಡ ಕಾರ್ಮಿಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಪೊಲೀಸರು ಕಟ್ಟಡದ ಮಾಲೀಕ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅಶ್ವತ್ ಸಾವನ್ನಪ್ಪಿರುವ ಕಾರ್ಮಿಕ. ಹೊಯ್ಸಳ ನಗರದ 18ನೇ ಅಡ್ಡರಸ್ತೆ ಬಳಿ ಶವ ಬಿದ್ದಿರುವುದನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಗುರುತಿಸಿದ್ದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಶ್ವತ್ ತಲೆಗೆ ಕಟ್ಟಿಗೆ ಮತ್ತು ಕಬ್ಬಣದ ರಾಡ್‌ನಿಂದ ಹೊಡೆಯಲಾಗಿದೆ. ಹಗ್ಗ ಮತ್ತು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ, ಹಲ್ಲೆ ಕೂಡ ಮಾಡಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ಮಾಣ ಹಂತದ ಕಟ್ಟಡದ ಮಾಲೀಕ ಶ್ರೀನಿವಾಸ್ ರೆಡ್ಡಿ ಹಾಗೂ ಮತ್ತೊಬ್ಬ ಕಾರ್ಮಿಕ ಸುಬ್ಬಯ್ಯ ನಾಯ್ಡುನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.