ಬೆಂಗಳೂರು: ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಕುರಿತು ಶಾಲಾ ಪರಿಸರದಿಂದಲೇ ಮಾಹಿತಿ ತಿಳಿದುಕೊಳ್ಳಲು ಅನುವಾಗುವಂತಹ ಹಾಗೂ ಶಿಕ್ಷಣ ಸಚಿವರೊಂದಿಗೆ ಮಾತನಾಡುವ ‘ಸಂವೇದನಾ’ ಸಂವಾದ ಕಾರ್ಯಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಿದರು.
ಶಾಲೆಗಳ, ಶಿಕ್ಷಕರ ಹಾಗೂ ಮಕ್ಕಳ ಸ್ಥಿತಿಗತಿ ಅರಿತುಕೊಳ್ಳಲು ಇಲಾಖೆಯಿಂದಲೇ ‘ಸಂವೇದನಾ’ ಎಂಬ ಹೊಸ ಫೋನ್ ಇನ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಸುಸಜ್ಜಿತವಾಗಿ ಬೆಳಗ್ಗೆ 11ಕ್ಕೆ ಫೋನ್-ಇನ್ ಥಿಯೇಟರ್ನಲ್ಲಿ ಫೋನ್ ಕರೆಗಳು ಪ್ರಾರಂಭವಾದವು. ಶಿಕ್ಷಕರು, ಪೋಷಕರು, ಎಸ್ಡಿಎಂಸಿ ಅಧ್ಯಕ್ಷರು ತಮ್ಮ ಶಾಲೆ, ಶಾಲಾ ಕಟ್ಟಡ, ಶಿಕ್ಷಕರ ಕೊರತೆ, ಕಂಪ್ಯೂಟರ್ ಕೊರತೆ, ಬ್ಯಾಟರಿ, ಸಮವಸ್ತ್ರ, ಮಕ್ಕಳ ಶೂಗಳ ಗುಣಮಟ್ಟದ ಕುರಿತು ಪ್ರಶ್ನೆಗಳನ್ನು ಕೇಳಿದರು.
ಬೀದರ್, ಚಾಮರಾಜನಗರ ಸೇರಿದಂತೆ ಇತರೆ ಜಿಲ್ಲೆಗಳ 38 ಮಂದಿ ಸಚಿವರಿಗೆ ಕರೆ ಮಾಡಿ 44 ಪ್ರಶ್ನೆಗಳನ್ನು ಕೇಳಿದರು. ಬಹುತೇಕ ಮಂದಿ ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ನಿರ್ಮಾಣ ಕುರಿತು ಪ್ರಶ್ನೆಗಳನ್ನು ಕೇಳಿದರೆ, ಹಲವರು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕೈಗೊಳ್ಳಬಹುದಾದ ಉಪ ಕ್ರಮಗಳ ಕುರಿತು ಸಲಹೆ ನೀಡಿದರು. ನೀಟ್ ಪರೀಕ್ಷೆ ಫಲಿತಾಂಶವನ್ನು ಪಿಯುಸಿ ಪರೀಕ್ಷೆಯ ನಂತರವೇ ಪ್ರಕಟಿಸುವಂತಾಗಬೇಕು. ನೀಟ್ ಫಲಿತಾಂಶ ಪಿಯು ಪರೀಕ್ಷೆಗಿಂತ ಮೊದಲೇ ಪ್ರಕಟವಾದರೆ ಮಕ್ಕಳು ಪಿಯು ಪರೀಕ್ಷೆಯ ಮೇಲೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದು ಮಧುಗಿರಿ ತಾಲೂಕಿನ ಬಿಜವಾರದ ಶಿಕ್ಷಕ ನಾಗರಾಜ ಸಲಹೆ ನೀಡಿದರು.
ಸಂವೇದನಾ-ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಸುರೇಶ್ ಕುಮಾರ್, ಮೊದಲನೇ ಸಂವಾದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ ಮಕ್ಕಳು ಸಹ ಮಾತನಾಡಿದ್ದರೆ ಹೆಚ್ಚಿನ ನೈಜ ವಿಚಾರಗಳು ದೊರೆಯುತ್ತಿದ್ದವು. ಮುಂದಿನ ಬಾರಿ ಮಕ್ಕಳು ಮಾತನಾಡುವಂತೆ ಪ್ರೇರೇಪಿಸಲಾಗುವುದು. ಇಂದು ದೊರೆತ ಸ್ಪಂದನೆಯಿಂದಾಗಿ ಈ ಸಂವೇದನಾ ಸಂವಾದವನ್ನು ಮುಂದುವರೆಸುವ ಉತ್ಸುಕತೆ ಉಂಟಾಗಿದ್ದು, ಶಿಕ್ಷಣ-ಶಾಲೆಗಳ ಕುರಿತು ಒಂದು ಉತ್ತಮವಾದ ಮಾಹಿತಿ ದೊರೆತಂತಾಗಿದೆ ಎಂದರು. ತಿಂಗಳಲ್ಲಿ ಎರಡು ಬಾರಿ ಸಂವೇದನಾ ಸಂವಾದ ನಡೆಯಲಿದೆ ಎಂದರು.