ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆಗಳ ಪ್ರಮಾಣಿತ ಕಾರ್ಯಚರಣಾ ವಿಧಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು ಆರೋಗ್ಯ ಇಲಾಖೆಯು ನೀಡಿರುವ ಮಾರ್ಗಸೂಚಿ ಅನುಸರಣೆಗೆ ಬೇಕಾದ ಸಿದ್ಧತೆಗಳ ಕುರಿತು ತಮ್ಮ ಅಭಿಪ್ರಾಯವನ್ನು ಎಲ್ಲಾ ಜಿಲ್ಲಾಡಳಿತಗಳೊಂದಿಗೆ ಹಂಚಿಕೊಂಡಿದ್ದಾರೆ.
ಹಾಗೆಯೇ ಮಾನ್ಯ ಮುಖ್ಯಮಂತ್ರಿಗಳನ್ನು ಸಭೆಗೆ ಮುನ್ನ ಖುದ್ದಾಗಿ ಭೇಟಿ ಮಾಡಿ, ಪರೀಕ್ಷಾ ದಿನಾಂಕ ಪ್ರಕಟಣೆಗೆ ಮೌಖಿಕ ಒಪ್ಪಿಗೆ ಪಡೆಯಲಾಗಿದೆ ಎಂದು ಸುರೇಶ್ ಕುಮಾರ್ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ:ಒಂದಲ್ಲ, ಎರಡಲ್ಲ, ಮಹಿಳೆಗೆ ಒಂದೇ ದಿನ ಮೂರು ಸಲ ಕೋವಿಡ್ ವ್ಯಾಕ್ಸಿನ್!
ಆರೋಗ್ಯ ಇಲಾಖೆಯು ಸಿದ್ಧಪಡಿಸಿ ನೀಡಿರುವ ಪ್ರಮಾಣಿತ ಕಾರ್ಯಚರಣಾ ವಿಧಾನಗಳ ಆಧಾರದಲ್ಲಿ ಜುಲೈನಲ್ಲಿ ನಿಗದಿತ ದಿನಾಂಕಗಳಂದು ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ನಡೆಸುವ ವಿಶ್ವಾಸ ಇದೆ. ಸುರಕ್ಷಿತವಾಗಿ ನಡೆಯಲಿರುವ ಈ ಪರೀಕ್ಷೆಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯವೆನ್ನುವುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸುರೇಶಕುಮಾರ್ ಹೇಳಿದ್ದಾರೆ.