ಮೈಸೂರು: ಜುಲೈ 2 ನೇ ವಾರ ಪಿಯುಸಿ ಫಲಿತಾಂಶ ಹಾಗೂ ಜುಲೈ 31 ರ ರೊಳಗೆ ಎಸ್ಎಸ್ಎಲ್ಸಿ ಫಲಿತಾಂಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಹೇಳಿದ್ದಾರೆ.
ಪಿಯುಸಿ ಫಲಿತಾಂಶ ಕುರಿತು ಸುರೇಶಕುಮಾರ್ ಪ್ರತಿಕ್ರಿಯೆ ಇಂದು ಮೈಸೂರು, ಮಂಡ್ಯ ಹಾಗೂ ಮಡಿಕೇರಿಯ ಶಿಕ್ಷಣಾಧಿಕಾರಗಳ ಸಭೆ ನಡೆಸಿದ ಬಳಿಕ ಈಟಿವಿ ಭಾರತದ ಜೊತೆ ಮಾತನಾಡಿದ ಸಚಿವರು, ಎಸ್ಎಸ್ಎಲ್ಸಿ ಪರೀಕ್ಷೆ ಜುಲೈ 4 ರಂದು ಮುಗಿಯುತ್ತದೆ. ಈ ಪರೀಕ್ಷೆ ಮುಗಿದ 15 ದಿನಕ್ಕೆ ಪುನಃ ಕಾರಣಾಂತರಗಳಿಂದ ಪರೀಕ್ಷೆಗೆ ಹಾಜರಾಗದವರು ಮತ್ತು ಅನುತ್ತೀರ್ಣ ಆದವರಿಗೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ಬಾರಿಯ ಶೈಕ್ಷಣಿಕ ವರ್ಷ ಯಾವಾಗ ಆರಂಭವಾಗಬೇಕು ಎಂಬ ಬಗ್ಗೆ ಕೇಂದ್ರದಿಂದ ಗೈಡ್ಲೈನ್ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಈ ವರ್ಷ ಕೊರೊನಾ ವರ್ಷವಾಗಿರುವುದರಿಂದ ಶಾಲಾ-ಕಾಲೇಜುಗಳಲ್ಲಿ ಶುಲ್ಕವನ್ನು ಹೆಚ್ಚಿಸಬಾರದೆಂದು ಗೈಡ್ಲೈನ್ ನೀಡಲಾಗಿದೆ. ಮುಖ್ಯವಾಗಿ ಜೂನ್ 25 ರಿಂದ ಜುಲೈ 4 ವರೆಗೆ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ 8,48,500 ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಗುವುದು. ಜೊತೆಗೆ ಪರೀಕ್ಷಾ ಕೊಠಡಿಗಳಲ್ಲಿ 24 ವಿದ್ಯಾರ್ಥಿಗಳಿಗೆ ಬದಲಾಗಿ 18 ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ ಸಾಮಾಜಿಕ ಅಂತರದಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು ಎಂದರು.
ಈ ಬಾರಿ ಸುರಕ್ಷತೆ ಹಾಗೂ ಆತ್ಮವಿಶ್ವಾಸದ ಪರಿಕಲ್ಪನೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ಇದೇ ವೇಳೆ ಶಿಕ್ಷಣ ಸಚಿವರು ಮಾಹಿತಿ ನೀಡಿದರು.