ಕರ್ನಾಟಕ

karnataka

ETV Bharat / city

100 ಕೋಟಿ ರೂ. ಅನುದಾನಿತ ಯೋಜನೆ ಮೌಲ್ಯಮಾಪನಕ್ಕೆ ಸಿಎಂ ಸೂಚನೆ: ಸಚಿವ ಸುರೇಶ್ ಕುಮಾರ್ - Implementation of central award schemes

ಕೇಂದ್ರದ ಅನುದಾನವನ್ನು ಸಂಪೂರ್ಣವಾಗಿ ಬಳಸಲು ನಾವು ಸಫಲರಾಗಿದ್ದೇವೆ. 100 ಕೋಟಿ ರೂ. ಹೆಚ್ಚಿನ ಅನುದಾನಿತ ಯೋಜನೆಗಳ ಮೌಲ್ಯಮಾಪನ‌ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

Minister Suresh Kumar
ಸಚಿವ ಸುರೇಶ್ ಕುಮಾರ್

By

Published : Jul 20, 2021, 2:21 PM IST

ಬೆಂಗಳೂರು: ಕೇಂದ್ರದ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಾವು ಸಫಲರಾಗಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

100 ಕೋಟಿ ರೂ. ಅನುದಾನಿತ ಯೋಜನೆ ಮೌಲ್ಯಮಾಪನ ಮಾಡಲು ಸಿಎಂ ಸೂಚನೆ: ಸಚಿವ ಸುರೇಶ್ ಕುಮಾರ್

ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಸಂಬಂಧ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂಬುದು ನಮ್ಮ ಗುರಿ. ಕೇಂದ್ರದ ಅನುದಾನವನ್ನು ಸಂಪೂರ್ಣವಾಗಿ ಬಳಸಲು ನಾವು ಸಫಲರಾಗಿದ್ದೇವೆ. ಕೇಂದ್ರದ ಅನುದಾನದ‌ ಪೈಕಿ ಈ ವರ್ಷ ಶೇ 87ರಷ್ಟು ಹಣ ಬಂದಿದೆ. ಈವರೆಗೆ 16,320 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಉಳಿದ ಹಣ ಈ ವರ್ಷ ಬಿಡುಗಡೆಯಾಗಲಿದೆ ಎಂದರು.

16,320 ಕೋಟಿ ರೂ. ಬಿಡುಗಡೆ

ಸಿಎಂ ಇಂದು ನರೇಗಾ, ಪಿಎಂ ಗ್ರಾಮ ಸಡಕ್ ಯೋಜನೆ, ಜಲ ಜೀವನ್ ಮಿಷನ್, ಮಧ್ಯಾಹ್ನದ ಬಿಸಿಯೂಟ, ಸಮಗ್ರ ಶಿಕ್ಷಣ, ರಾಷ್ಟ್ರೀಯ ಆರೋಗ್ಯ ಮಿಷನ್, ರಾಜ್ಯ ವಿಪತ್ತು ನಿರ್ವಹಣ ನಿಧಿ, ಪೌಷ್ಟಿಕಾಂಶ ಕಾರ್ಯಕ್ರಮ, ಪಿಎಂ ಆವಾಸ್ ಯೋಜನೆಗಳ ಜಾರಿ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು‌. ರಾಜ್ಯದಲ್ಲಿ 24 ವಿವಿಧ ಇಲಾಖೆಗಳಲ್ಲಿ 96 ಕೇಂದ್ರ ಪುರಸ್ಕೃತ ಯೋಜನೆಗಳು ಅನುಷ್ಠಾನದಲ್ಲಿವೆ. 2020-21 ಸಾಲಿನಲ್ಲಿ ಒಟ್ಟು 39,601 ಕೋಟಿ ರೂ. ಮೊತ್ತದ ಯೋಜನೆಗಳಲ್ಲಿ, ಕೇಂದ್ರದ ಪಾಲು 18,715 ಕೋಟಿ ರೂ. ಆಗಿದೆ. ಮಾರ್ಚ್ ಅಂತ್ಯದವರೆಗೆ 16,320 ಕೋಟಿ ರೂ. ಬಿಡುಗಡೆಯಾಗಿದೆ. ಬಾಕಿ 2,394 ಕೋಟಿ ರೂ. ಇದೆ ಎಂದು ವಿವರಿಸಿದರು.

2021-22 ಸಾಲಿನಲ್ಲಿ ಒಟ್ಟು ಕೇಂದ್ರದ ಅನುದಾನ 38,0078 ಕೋಟಿ ರೂ. ಆಗಿದ್ದು, ಈ ಪೈಕಿ 17,356 ಕೇಂದ್ರದ ಪಾಲಾಗಿದೆ. ಈವರೆಗೆ 4,074 ಕೋಟಿ ರೂ. ಬಿಡುಗಡೆಯಾಗಿದೆ. ಬಹುತೇಕ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ ಅನುದಾನ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಇದೆ. ನರೇಗಾದಡಿ 2020-21 ಸಾಲಿನಲ್ಲಿ 1,289 ಕೋಟಿ ಬಿಡುಗಡೆಯಾಗಿದೆ. ಕಳೆದ ವರ್ಷ ಶೇ 100ರಷ್ಟು ಬೌತಿಕ ಪ್ರಗತಿ ಸಾಧಿಸಲಾಗಿದೆ. ಈ ವರ್ಷ ಜುಲೈ 18 ವರೆಗೆ ಸುಮಾರು 6 ಕೋಟಿ ಮಾನವ ದಿನ ಸೃಜಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಸಡಕ್ ಯೋಜನೆಯಡಿ 495 ಕಿ.ಮೀ. ರಸ್ತೆ ಕಾಮಗಾರಿ

ಕಳೆದ ವರ್ಷ ಪಿಎಂ ಗ್ರಾಮ ಸಡಕ್ ಯೋಜನೆಯಡಿ 495 ಕಿ.ಮೀ. ರಸ್ತೆ ಕಾಮಗಾರಿ ಮಾಡಲು ಸಾಧ್ಯವಾಗಿದೆ. ಈ ವರ್ಷ 5611 ಕಿ.ಮೀ ರಸ್ತೆ ನಿರ್ಮಾಣದ ಗುರಿ ಇದೆ. ರಾಷ್ಟ್ರೀಯ ಗ್ರಾಮೀಣ ಕುಡಿವ ನೀರಿನ ಯೋಜನೆಯಡಿ ಈ ವರ್ಷ 25 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕೊಡಲು ಸಿಎಂ ಆದೇಶ ನೀಡಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಡಿ ಮಕ್ಕಳಿಗೆ ಮನ ಬಾಗಿಲಿಗೆ ಆಹಾರ ಸಾಮಗ್ರಿ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಆ ಗುರಿ ಸಾಧಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಈ ವರ್ಷ 252 ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಈ ವರ್ಷ ಎಲ್ಲ ಡಿಸಿಗಳಿಗೆ 646 ಕೋಟಿ ರೂ.‌ ಬಿಡುಗಡೆ ಮಾಡಲಾಗಿದೆ. ಪಿಎಂ ಆವಾಸ್ ಯೋಜನೆಯಡಿ ಸ್ಲಂ ಪ್ರದೇಶಗಳಲ್ಲಿ 1,20000 ಮನೆ ನಿರ್ಮಾಣ, ನಗರ ಪ್ರದೇಶಗಳಲ್ಲಿ 69,000 ಮನೆ ಕಟ್ಟುವ ಗುರಿ ನೀಡಲಾಗಿದೆ. ಇದೇ ವೇಳೆ, 100 ಕೋಟಿ ರೂ. ಹೆಚ್ಚಿನ ಅನುದಾನಿತ ಯೋಜನೆಗಳ ಮೌಲ್ಯಮಾಪನ‌ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.‌ ಕರ್ನಾಟಕ ಮೌಲ್ಯಮಾಪನ ಪ್ರಧಿಕಾರ ಇದರ ಮೌಲ್ಯಮಾಪನ‌ ಮಾಡಲಿದೆ ಎಂದರು.

ಆಗಸ್ಟ್ 10ಕ್ಕೆ ಎಸ್ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ‌

ಇದೇ ವೇಳೆ, ಆಗಸ್ಟ್ 10ಕ್ಕೆ ಎಸ್ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ‌ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಡಿದ್ದು, ಭಾಷಾ ಪತ್ರಿಕೆಗಳ ಪರೀಕ್ಷೆ ಇದೆ. ಸುಸೂತ್ರವಾಗಿ ಪರೀಕ್ಷೆ ನಡೆಯುವ ವಿಶ್ವಾಸವಿದೆ. ನಿನ್ನೆ (ಸೋಮವಾರ) ಎಸ್ಎಸ್​ಎಲ್​ಸಿ ಮೊದಲ ಪತ್ರಿಕೆ ಪರೀಕ್ಷೆ ಪೂರ್ಣವಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇದು ಕೇವಲ ಶಿಕ್ಷಣ ಇಲಾಖೆಯ ಪರೀಕ್ಷೆ ಆಗಿರಲಿಲ್ಲ. ಸಮಾಜದ ಪರೀಕ್ಷೆ ಆಗಿತ್ತು ಎಂದರು.

ಇನ್ನು, 58 ಎಸ್ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿವೆ. ಆ ಮಕ್ಕಳು ಬೇರೆ ಬೇರೆ ಸಿಸಿಸಿ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಲಕ್ಷಣಗಳು ಗೋಚರಿಸಿದವು. ಯಾವುದೇ ಲೋಪವಾಗದಂತೆ ಹಾಗೂ ಮಕ್ಕಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. 111 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ ಎಂದು ವಿವರಣೆ ನೀಡಿದರು.

ABOUT THE AUTHOR

...view details