ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವಿಶೇಷವಾಗಿ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಬಾರಿ ಸುಮಾರು 8,75,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಆಗಿದ್ದಾರೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡುವುದು ಹಾಗೂ ಅವರ ಕಲಿಕಾ ಮಟ್ಟ ನಿರ್ಧಾರ ಮಾಡುವುದು ಕಷ್ಟವಾಗುತ್ತಿದೆ. ಇದಕ್ಕೆ ಕಾರಣ, ಕಳೆದ ವರ್ಷ 9ನೇ ತರಗತಿಯ ಪರೀಕ್ಷೆಯನ್ನೇ ನಡೆಸಿರಲಿಲ್ಲ. ಯಾವುದೇ ಮಾನದಂಡ ಇಲ್ಲದಿರುವುದರಿಂದ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. 2021ರ ಎಸ್ಎಸ್ಎಲ್ಸಿ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಯಲ್ಲಿ ಇರಲಿದ್ದು, ಒಂದು ಕೋರ್ ವಿಷಯ ಇನ್ನೊಂದು ಭಾಷಾ ವಿಷಯವಾಗಿ ಇರಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಕೋರ್ ವಿಷಯಗಳಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮೂರು ಸೇರಿಸಿ ಒಂದು ಪ್ರಶ್ನೆ ಪತ್ರಿಕೆ, ಇನ್ನೊಂದು ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್, ಹಿಂದಿ ಈ ಮೂರು ವಿಷಯ ಗಳು ಸೇರಿ ಒಂದು ಮಾದರಿ ಪತ್ರಿಕೆಯಾಗಿ ಇರಲಿದೆ. ಇವೆಲ್ಲವೂ ಬಹು ಆಯ್ಕೆಯ ಪ್ರಶ್ನೆಗಳಾಗಿದ್ದು, ಆರು ದಿವಸಗಳ ಕಾಲ ನಡೆಯುವ ಪರೀಕ್ಷೆಯನ್ನ ಈ ಬಾರಿ ಎರಡು ದಿವಸಕ್ಕೆ ಇಳಿಕೆ ಮಾಡಲಾಗಿದೆ.
2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹೊಸ ಮಾದರಿಯ ಪರೀಕ್ಷೆ ಕುರಿತು ಮಾರ್ಗದರ್ಶನ ನೀಡುವ ಸಲುವಾಗಿ ‘ಬನ್ನಿ ವಿದ್ಯಾರ್ಥಿಗಳೇ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಬರೆಯೋಣ’ ಎಂಬ ಧ್ಯೇಯ ವಾಖ್ಯದೊಂದಿಗೆ ಮಕ್ಕಳೊಂದಿಗೆ ಸಂವಾದ ನಡೆಸುವಂತ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಬನಶಂಕರಿಯ ಡಿಎಸ್ಆರ್ಟಿಸಿಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನಡೆಸಿಕೊಡಲಿದ್ದಾರೆ. ರಾಜ್ಯದ ವಿವಿಧೆಡೆಯ 10ನೇ ತರಗತಿ ಪರೀಕ್ಷಾರ್ಥಿಗಳು ಆಯಾ ಜಿಲ್ಲೆಗಳ ಡಯಟ್ ಮತ್ತು ಡಿಡಿಪಿಐ ಕಚೇರಿಗಳಿಂದ ಸಚಿವರೊಂದಿಗೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಎರಡು ದಿನ ಈ ವಿಡಿಯೋ ಸಂವಾದ ನಡೆಯಲಿದ್ದು, ಜುಲೈ 9 ಹಾಗೂ 14 ರಂದು ಬೆಳಗ್ಗೆ 11 ರಿಂದ 1: 30ರವರೆಗೆ ನಡೆಯಲಿದೆ.