ನವದೆಹಲಿ:ಹಿಜಾಬ್ ವಿವಾದ ಕುರಿತು ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ಕೆಲ ಹೊತ್ತು ಕಾವೇರಿದ ವಾಕ್ಸಮರಕ್ಕೂ ಕಾರಣವಾಯಿತು. ಹಿಜಾಬ್ ಬಟ್ಟೆ ಧರಿಸುವುದು ಹಕ್ಕು ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಹೇಳಿದರೆ, ಬಟ್ಟೆ ಧರಿಸದೇ ಇರುವುದೂ ಕೂಡ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಹೇಳಿತು. ಇದು ವಿಚಾರಣೆಯ ಕಾವನ್ನು ತೀವ್ರಗೊಳಿಸಿತು.
ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸಲು ನಿಷೇಧಿಸಿದ ಕುರಿತು ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಎರಡನೇ ದಿನದ ವಿಚಾರಣೆ ನಡೆಸುತ್ತಿದೆ.
ಫಿರ್ಯಾದುದಾರರ ಪರವಾಗಿ ವಾದ ಮಂಡಿಸುತ್ತಿರುವ ದೇವದತ್ ಕಾಮತ್ ಒಂದು ಹಂತದಲ್ಲಿ ಹಿಜಾಬ್ ಧರಿಸುವುದು ಮಹಿಳೆಯರ ಹಕ್ಕಾಗಿದೆ ಎಂದರು. ಈ ವೇಳೆ ನ್ಯಾ.ಹೇಮಂತ್ ಗುಪ್ತಾ ಅವರು ಬಟ್ಟೆ ಧರಿಸುವುದು ಹಕ್ಕಾದರೆ, ಧರಿಸದೇ ಇರುವುದು ಹಕ್ಕಿನಡಿಯೇ ಬರುತ್ತದೆ ಎಂದರು. ಈ ವೇಳೆ ಕಾಮತ್ ಶಾಲೆಯಲ್ಲಿ ಯಾರೂ ಕೂಡ ಬಟ್ಟೆ ಕಳಚಲ್ಲ ಎಂದರು. ಬಟ್ಟೆ ಹಕ್ಕಿನ ವ್ಯಾಪ್ತಿಯಲ್ಲಿ ವಾದ ಮಂಡಿಸಿದರೆ, ತಾರ್ಕಿಕ ಅಂತ್ಯ ಕಾಣದು ಎಂದು ಪೀಠ ಇದೇ ವೇಳೆ ಹೇಳಿತು.
ಮುಂದುವರಿದು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್(ಶಿರಸ್ತ್ರಾಣ)ಗಾಗಿ ಒತ್ತಾಯಿಸುತ್ತಿದ್ದಾರೆ. ಉಳಿದ ಎಲ್ಲ ಸಮುದಾಯದ ವಿದ್ಯಾರ್ಥಿಗಳು ಅವರ ಬಟ್ಟೆಯ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಶಾಲೆಯ ಸಮವಸ್ತ್ರವನ್ನು ಅವರು ಪಾಲಿಸುತ್ತಿದ್ದಾರಲ್ಲವೇ ಎಂದು ಪೀಠ ಪ್ರಶ್ನಿಸಿತು.
ಶಾಲೆಗೆ ಬರುವ ಅನೇಕ ವಿದ್ಯಾರ್ಥಿಗಳು ಧಾರ್ಮಿಕ ಸಂಕೇತವಾದ ರುದ್ರಾಕ್ಷಿ, ಶಿಲುಬೆಯನ್ನು ಧರಿಸಿರುತ್ತಾರೆ ಎಂದು ವಕೀಲ ಕಾಮತ್ ಹೇಳಿದಾಗ, "ಅದು ಬಟ್ಟೆಯ ಒಳಗಿರುತ್ತದೆ. ರುದ್ರಾಕ್ಷಿ, ಶಿಲುಬೆಯನ್ನು ಯಾರೂ ಕೂಡ ಅಂಗಿಯ ಮೇಲೆ ಹಾಕಿಕೊಂಡು ಪ್ರದರ್ಶಿಸುವುದಿಲ್ಲವಲ್ಲ ಎಂದು ನ್ಯಾಯಾಧೀಶರು ಹೇಳಿದರು.
ವಾದ- ಪ್ರತಿವಾದ ಮಂಡನೆ ಬಳಿಕ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ನಾಳೆ 11.30 ಕ್ಕೆ ವಿಚಾರಣೆ ಆರಂಭಿಸಿ ಅರ್ಜಿ ವಿಚಾರಣೆ ಅಂತ್ಯಗೊಳಿಸಲು ಕೋರ್ಟ್ ನಿರ್ಧರಿಸಿದೆ.
ಪ್ರಕರಣವೇನು?:ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಈ ಹಿಜಾಬ್ ವಿವಾದ ದೇಶ ಸೇರಿದಂತೆ ವಿದೇಶಕ್ಕೂ ಇದು ಹಬ್ಬಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದನ್ನು ಪ್ರಶ್ನಿಸಲಾಗಿತ್ತು. ಬಳಿಕ ಶಾಲಾ ಅಭಿವೃದ್ಧಿ ಸಮಿತಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಿತ್ತು. ಬಳಿಕ ಸರ್ಕಾರವೂ ಕೂಡ ಸಮವಸ್ತ್ರ ನಿಯಮ ರೂಪಿಸುವ ಹಕ್ಕು ಸಮಿತಿಗಳಿಗಿದೆ ಎಂಬ ಆದೇಶ ಹೊರಡಿಸಿತ್ತು.
ಇದರ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠವು ಶಾಲಾ - ಕಾಲೇಜುಗಳ ತರಗತಿಯೊಳಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಅಧಿಕಾರ ಸರ್ಕಾರಿ ಕಾಲೇಜುಗಳ ಅಭಿವೃದ್ಧಿ ಸಮಿತಿಗಳಿಗಿದೆ ಎಂಬ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದು ಮಾರ್ಚ್ 15 ರಂದು ತೀರ್ಪು ನೀಡಿತ್ತು.
ಓದಿ: ಹಿಜಾಬ್ ಪರ ಸುಪ್ರೀಂಗೆ ಮೇಲ್ಮನವಿ: ಸೆಪ್ಟೆಂಬರ್ 7ಕ್ಕೆ ವಿಚಾರಣೆ ಮುಂದೂಡಿಕೆ