ಬೆಂಗಳೂರು: ಆಪರೇಷನ್ ಕಮಲದ ಭಾಗವಾಗಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರಿಗೆ ₹30 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರು ಬಿಜೆಪಿ ನಾಯಕರ ವಿರುದ್ಧ ದಾಖಲಿಸಿದ್ದ ದೂರಿನ ಮೇರೆಗೆ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದು ಕೋರಿ ಸಚಿವ ಸಿ.ಎನ್ ಅಶ್ವತ್ಥನಾರಾಯಣ, ಶಾಸಕರಾದ ಶ್ರೀನಿವಾಸಗೌಡ, ಎಸ್.ಆರ್. ವಿಶ್ವನಾಥ್, ಸಿ.ಪಿ ಯೋಗೇಶ್ವರ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಜನಪ್ರತಿನಿಧಿಗಳ ವಿರುದ್ಧ ದೂರು ದಾಖಲಿಸುವ ಮುನ್ನ ದೂರುದಾರರು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ ಪಿಸಿಆರ್ ದಾಖಲಿಸುವ ಮುನ್ನ ದೂರುದಾರರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ನಿಯಮಾನುಸಾರ ಇಲ್ಲವೆಂದು ಅಭಿಪ್ರಾಯಪಟ್ಟ ಪೀಠ, ಸಮನ್ಸ್ ರದ್ದುಪಡಿಸಿದೆ.