ಬೆಂಗಳೂರು: ಕೊರೊನಾ ಲಾಕ್‌ಡೌನ್ ನಡುವೆ ರಾಜ್ಯದಲ್ಲಿ ಸೋಂಕಿನ ತೀವ್ರತೆ ಮುಂದುವರೆದಿದೆ. ಜಿಲ್ಲಾಸ್ಪತ್ರೆಗಳ ಸ್ಥಿತಿಗತಿ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವಲೋಕಿಸಿದ್ದು, ಮಾಹಿತಿಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಆರೋಗ್ಯ ಸಚಿವ ಡಾ. ಸುಧಾಕರ್ ಜಿಲ್ಲಾ ಪ್ರವಾಸ ನಡೆಸಿದ್ದಾರೆ. ದಾವಣಗೆರೆ, ಹಾವೇರಿ, ಹುಬ್ಬಳ್ಳಿ,ಗದಗ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಸ್ಥಿತಿಗತಿ ಪರಿಶೀಲನೆ ನಡೆಸಿದ್ದಾರೆ.
ಬೆಡ್ ವ್ಯವಸ್ಥೆ, ಆಮ್ಲಜನಕ ಪೂರೈಕೆ, ಔಷಧ ದಾಸ್ತಾನು, ಆಕ್ಸಿಜನ್ ಕಾನ್ಸನ್ಟ್ರೇಟರ್ ಇತ್ಯಾದಿಗಳ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ. ಕೊರೊನಾ ಸೋಂಕಿತರ ಚಿಕಿತ್ಸೆ ಯಾವ ರೀತಿ ನಡೆಯಿತ್ತಿದೆ.
ಜಿಲ್ಲಾ ಆರೋಗ್ಯ ಘಟಕ ಕೋವಿಡ್ ನಿಯಂತ್ರಣವನ್ನು ಯಾವ ರೀತಿ ನಿರ್ವಹಣೆ ಮಾಡುತ್ತಿದೆ. ಸೋಂಕಿನ ಸಂಖ್ಯೆ ಗುಣಮುಖರ ಸಂಖ್ಯೆ, ಸಾವಿನ ಅನುಮಾಪ ಎಲ್ಲ ಮಾಹಿತಿ ಪಡೆಸಿದ್ದಾರೆ.
ಚಾಮರಾಜನಗರ ದುರಂತ ಘಟನೆ ನಂತರ ಎಚ್ಚರಿಕೆ ವಹಿಸಿದ್ದು, ಅದನ್ನೆಲ್ಲಾ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ಸಲಹೆ, ಸೂಚನೆ ನೀಡಿದ್ದಾರೆ.
ಈ ಎಲ್ಲಾ ಮಾಹಿತಿಯೊಂದಿಗೆ ಜಿಲ್ಲೆಗಳಲ್ಲಿ ಯಾವ ರೀತಿ ಕೊರೊನಾ ಚಿಕಿತ್ಸೆ ನೀಡಲಾಗುತ್ತಿದೆ, ಆರೋಗ್ಯ ಇಲಾಖೆಯಿಂದ ಸೋಂಕಿತರ ಚಿಕಿತ್ಸೆ ಮತ್ತು ಸೋಂಕು ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ, ಜಿಲ್ಲಾಸ್ಪತ್ರೆಗಳ ಸ್ಥಿತಿಗತಿ ಕುರಿತು ಸಿಎಂ ಯಡಿಯೂರಪ್ಪಗೆ ಸಚಿವ ಸುಧಾಕರ್ ಸಮಗ್ರ ಮಾಹಿತಿ ನೀಡಿದ್ದಾರೆ.
ಬ್ಲಾಕ್ ಫಂಗಸ್‌ಗೆ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸುಧಾಕರ್ ಅವರಿಗೆ ಮಾಹಿತಿ ಪಡೆದಿರುವ ಸಿಎಂ ಯಡಿಯೂರಪ್ಪ, ಈ ಮಾಹಿತಿ ಆಧಾರದಲ್ಲಿ ಸಚಿವರು ಮತ್ತು ಅಧಿಕಾರಿಗಳ ಜೊತೆ ನಡೆಯುವ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.