ಬೆಂಗಳೂರು: ಬಿಬಿಎಂಪಿ ವಾರ್ಡ್ ವಿಂಗಡಣೆ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆಗಳು ಹರಿದು ಬರುತ್ತಿದ್ದು, 2 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ಕಾಂಗ್ರೆಸ್, ಜೆಡಿಎಸ್, ಎಎಪಿ, ಎಸ್ಡಿಪಿಐ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಆಕ್ಷೇಪಣೆ ಅರ್ಜಿಗಳು ಸಲ್ಲಿಕೆಯಾಗಿವೆ.
ಅರ್ಜಿದಾರರು ವಾರ್ಡ್ ವಿಂಗಡಣೆ ಸರಿಯಿಲ್ಲ, ಇದರಲ್ಲಿ ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗಿದೆ. ಕೆಲ ವಾರ್ಡ್ ಒಡೆದು ಬೇರೆ, ಬೇರೆ ವಾರ್ಡ್ ಗಳಿಗೆ ಹಂಚಿಕೆ ಮಾಡಿದ್ದಾರೆ. ಬಿಜೆಪಿ ಪಕ್ಷ ಹೊರತುಪಡಿಸಿ ಅನ್ಯ ಪಕ್ಷಗಳ ವಾರ್ಡ್ಗಳನ್ನು ಬೇಕಂತಲೇ ಮಾಡಿ ವಿಂಗಡಣೆ ಮಾಡಿದ್ದಾರೆ ಎಂದು ದೂರುಗಳಲ್ಲಿ ಉಲ್ಲೇಖಿಸಿದ್ದಾರೆ.
ವಾರ್ಡ್ ವಿಂಗಡಣೆ ಹೆಸರಲ್ಲಿ ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ವಿಂಗಡಿಸಿದೆ. ಒಂದೇ ರಸ್ತೆಯನ್ನು ಎರಡು ವಾರ್ಡ್ಗಳಿಗೆ ಹಂಚಿಕೆ ಮಾಡಿದ್ದಾರೆ. ಲೇಔಟ್ಗಳನ್ನೂ ಎರಡು ಭಾಗ ಮಾಡಿ ವಿಂಗಡಿಸಿದ್ದಾರೆ. ಇತಿಹಾಸ ಇರುವ ಹೆಸರುಗಳನ್ನೂ ತೆಗೆದು ಹಾಕಿ ಒಂದು ಸಮುದಾಯಕ್ಕೆ ಸೇರಿದ ಹೆಸರುಗಳನ್ನು ಇಡಲಾಗಿದೆ. ಈ ರೀತಿ ವಿಂಗಡಣೆಯಿಂದ ಅನ್ಯಾಯವಾಗಿದೆ ಎಂದು ಹಲವರು ಆರೋಪಿಸಿದ್ದಾರೆ.
15 ದಿನಗಳ ಕಾಲಾವಕಾಶ: ನೂತನವಾಗಿ ರೂಪುಗೊಂಡ 243 ವಾರ್ಡ್ ವಿಂಗಡಣೆ ಸಂಬಂಧ ಸಾರ್ವಜನಿಕರು ಮುಕ್ತವಾಗಿ ಆಕ್ಷೇಪಣೆ ಸಲ್ಲಿಸಲು ಅರ್ಜಿ ಸಲ್ಲಿಸುವಂತೆ ಸರ್ಕಾರ ಈ ಹಿಂದೆ ಸೂಚಿಸಿತ್ತು. ಅದರಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಆನ್ಲೈನ್ ಮುಖಾಂತರ ಮತ್ತು ವಿಧಾನಸೌಧದ ಡಿಪಿಅರ್ ಕಚೇರಿಯಲ್ಲಿ ಅರ್ಜಿ ಸಲ್ಲಿಕೆಗೆ 15 ದಿನಗಳ ಆಕ್ಷೇಪಣೆಗೆ ಕಾಲವಾಕಾಶ ನೀಡಲಾಗಿತ್ತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಹೈಕೋರ್ಟ್ ಚಾಟಿ ಬೆನ್ನಲೇ ಎಚ್ಚೆತ್ತ ಎಸಿಬಿ: ಬೆಂಗಳೂರು ಡಿಸಿಗೆ ನೋಟಿಸ್