ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿರ್ದೇಶನದಂತೆ ಉಚಿತ/ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ರಿಯಾಯಿತಿ ಪಾಸ್ಗಳನ್ನು ವಿತರಣೆ ಮಾಡುತ್ತಿದೆ. ಅದರಂತೆ 2020-21ನೇ ಸಾಲಿನ ವಿದ್ಯಾರ್ಥಿ ಪಾಸ್ಗಾಗಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸ್ಗಳನ್ನು ಬೆಂಗಳೂರು ಒನ್ ಕೇಂದ್ರಗಳಲ್ಲಿ ಡಿಸೆಂಬರ್ 21ರಿಂದ ವಿತರಣೆ ಮಾಡಲಾಗುತ್ತಿದೆ.
2020-21ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸ್ನ ಆನ್‌ಲೈನ್ ಅರ್ಜಿಯು ಸೇವಾ ಸಿಂಧು ಪೋರ್ಟಲ್‌ನಲ್ಲಿ ಹಾಗೂ ಬೆಂ.ಮ.ಸಾ. ಸಂಸ್ಥೆಯ ವೆಬ್ಸೈಟ್ WWW.mybmtc.comನಲ್ಲಿ ಲಭ್ಯವಿರುತ್ತದೆ. ಪ್ರಸ್ತುತ ಪದವಿ/ವೃತ್ತಿಪರ/ತಾಂತ್ರಿಕ/ ವೈದ್ಯಕೀಯ/ಸಂಜೆಕಾಲೇಜು/ಪಿಹೆಚ್ಡಿ ವಿದ್ಯಾರ್ಥಿಗಳ ಪಾಸ್ಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆಗಳು ಹಾಗೂ ಪಿಯುಸಿ ಕಾಲೇಜು ವಿದ್ಯಾರ್ಥಿಗಳ ಪಾಸ್ ವಿತರಣೆ ಬಗ್ಗೆ ಪ್ರತ್ಯೇಕವಾಗಿ ತಿಳಿಸಲಾಗುತ್ತದೆ.
ಪಾಸ್ ವಿತರಣೆ ಕುರಿತು ಮಾಧ್ಯಮ ಪ್ರಕಟಣೆ ಕಾಲೇಜು ವಿದ್ಯಾರ್ಥಿ ಪಾಸ್ನ ಅರ್ಜಿಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಅನುಮೋದಿಸುವುದು, ಅನುಮೋದಿಸಿದ ನಂತರ ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾಸ್ ವಿತರಣಾ ಬೆಂಗಳೂರು ಒನ್ ಕೇಂದ್ರ, ದಿನಾಂಕ, ಸಮಯವನ್ನು ನಿಗದಿಪಡಿಸಿಕೊಳ್ಳಬೇಕು ಮತ್ತು ಪಾಸ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡುವ ಸಂಧರ್ಭದಲ್ಲಿ ಕೇಂದ್ರ, ದಿನಾಂಕ, ಸಮಯವನ್ನು ನಿಗದಿಪಡಿಸಿಕೊಂಡ ಸ್ವೀಕೃತಿ ಪತ್ರ, ಶಾಲಾ/ಕಾಲೇಜಿನ ಗುರುತಿನ ಚೀಟಿ/ಶುಲ್ಕ ರಸೀದಿ/ ಶಾಲಾ ಮುಖ್ಯಸ್ಥರಿಂದ ದೃಢೀಕರಿಸಿದ ಪತ್ರವನ್ನು ಹಾಜರುಪಡಿಸುವಂತೆ ತಿಳಿಸಿದೆ.
ವಿದ್ಯಾರ್ಥಿಗಳ ಅರ್ಜಿಯನ್ನು ಅನುಮೋದಿಸಲು ಶಿಕ್ಷಣ ಸಂಸ್ಥೆಯವರು (ರಾಜ್ಯ ಪಠ್ಯಕ್ರಮ ಹೊಂದಿದ 1ರಿಂದ 10ನೇ ತರಗತಿವರೆಗಿನ ಶಾಲೆಗಳನ್ನು ಹೊರತುಪಡಿಸಿ) ಬೆಂ.ಮ.ಸಾ. ಸಂಸ್ಥೆಯ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಿದೆ. ಇನ್ನು ವಿದ್ಯಾರ್ಥಿ ಪಾಸ್ಗಳನ್ನು ಬೆಳಗ್ಗೆ 8 ಗಂಟೆಯಿಂದ ಸಂಜೆ 6:30 ಗಂಟೆಯವರೆಗೆ ಎಲ್ಲಾ ದಿನಗಳಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿತರಿಸಲಾಗುತ್ತದೆ. ಪಾಸ್ ವಿತರಣಾ ಬೆಂಗಳೂರು ಒನ್ ಕೇಂದ್ರಗಳ ಪಟ್ಟಿಯು ವೆಬ್ಸೈಟ್ನಲ್ಲಿ ಲಭ್ಯವಿದೆ.
ಕೆಎಸ್ಆರ್ಟಿಸಿ ನೌಕರರ ಮುಷ್ಕರ; ಮಾಸಿಕ ಬಸ್ ಪಾಸ್ ಅವಧಿ ವಿಸ್ತರಣೆ
ಡಿಸೆಂಬರ್ 11ರಿಂದ 14ರವರೆಗೆ ನಿಗಮದ ಸಿಬ್ಬಂದಿ ಮುಷ್ಕರವಿದ್ದ ಕಾರಣ, ಆ ದಿನಗಳಂದು ಬಸ್ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಮಾಸಿಕ ಬಸ್ ಪಾಸ್ ಪಡೆದಿರುವ ಪ್ರಯಾಣಿಕರು ಸದರಿ ದಿನಗಳಿಗೆ ಮಾಸಿಕ ಬಸ್ ಪಾಸ್ ವಿಸ್ತರಿಸಿ ನೀಡುವಂತೆ ಕೋರಲಾಗಿತ್ತು. ಹೀಗಾಗಿ ಆ ಅವಧಿಯಲ್ಲಿ ಚಾಲ್ತಿಯಲ್ಲಿರುವ ಹಂತವಾರು ವಿತರಣೆಯ ಮಾಸಿಕ ಬಸ್ ಪಾಸುಗಳನ್ನು (ಸಾಮಾನ್ಯ / ವೇಗದೂತ) ಪಾಸಿನ ಚಾಲ್ತಿ ಅವಧಿ ಮುಗಿದ ನಂತರದ 4 ದಿನಗಳಿಗೆ ಹೆಚ್ಚುವರಿಯಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ.