ಬೆಂಗಳೂರು:ಕೋವಿಡ್ ನಿಯಂತ್ರಣಕ್ಕೆ ಜನ ಸೂಕ್ತ ಸಹಕಾರ ನೀಡುತ್ತಿಲ್ಲ. ಇದರಿಂದ ಸಂಜೆಯೊಳಗೆ ಕಠಿಣ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಜ್ಞ ವೈದ್ಯರ ಜತೆ ಸಭೆ ನಡೆಸಿ ನಿರ್ಧಾರಕ್ಕೆ ಬಂದಿದ್ದೇವೆ. ಮನೆಯಲ್ಲೇ ಇದ್ದು ಸಹಕರಿಸುವಂತೆ ಕೋರಿದ್ದರೂ, ಕ್ವಾರಂಟೈನ್ ರೋಗಿಗಳು ಸರ್ಕಾರದ ಸಲಹೆಗೆ ಸಹಕರಿಸುತ್ತಿಲ್ಲ. ಸರ್ಕಾರ ಸೋಂಕಿನ ಅರಿವು ಮೂಡಿಸಲಿದೆ. ಸಂಜೆಯೊಳಗೆ ಕಠಿಣ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು. ರಾಜ್ಯ ಅಥವಾ ಬೆಂಗಳೂರು ನಗರವನ್ನ ಲಾಕ್‌ಡೌನ್ ಮಾಡುವ ಸಂಬಂಧ ಪ್ರತಿಪಕ್ಷ ನಾಯಕರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಖಾಸಗಿ ಆಸ್ಪತ್ರೆಗಳ ಸಹಕಾರವನ್ನ ಕೇಳಿದ್ದೇವೆ, ಅವರೂ ಸಹ ಸಹಕಾರ ನೀಡಲು ಒಪ್ಪಿದ್ದಾರೆ. ಹೊಸದಾಗಿ 1000 ವೆಂಟಿಲೇಟರ್ ಖರೀದಿಸುತ್ತೇವೆ. 30 ಫೀವರ್ ಕ್ಲಿನಿಕ್ ಆರಂಭಿಸುತ್ತೇವೆ. ಶಂಕಿತರ ಚಿಕಿತ್ಸೆಗೆ ಕ್ರಮಕೈಗೊಳ್ಳುತ್ತೇವೆ. ನಗರ ಪ್ರದೇಶದಲ್ಲಿರುವವರು ಹಳ್ಳಿಗಳಿಗೆ ಹೋಗಬೇಡಿ. ನಿನ್ನೆಯಂತೆ ಬೆಂಗಳೂರಿನಲ್ಲಿ ಜನರನ್ನ ನಿಯಂತ್ರಿಸೋದಕ್ಕೆ ಕ್ರಮಕೈಗೊಳ್ಳುತ್ತೇವೆ. ಸಂಜೆಯೊಳಗೆ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.