ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಸಾಕಷ್ಟು ಜನರಿಗೆ ಮೆದುಳಿನಲ್ಲಿ ಸಮಸ್ಯೆ ಕಂಡುಬರುತ್ತಿದ್ದು, ಪಾರ್ಶ್ವವಾಯು, ಮೂರ್ಛೆ, ರಕ್ತ ಹೆಪ್ಪುಗಟ್ಟುವಿಕೆ, ಕೈ ಕಾಲು ಸ್ವಾಧೀನ ಕಳೆದುಕೊಳ್ಳುವಂತಹ ಪ್ರಕರಣಗಳು ಕಂಡುಬರುತ್ತಿವೆ ಎಂದು ನರವಿಜ್ಞಾನ ಸಲಹೆಗಾರ ಡಾ. ನಿತಿನ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್ ಸೋಂಕು ತಗುಲಿದ ವ್ಯಕ್ತಿ ಗುಣಮುಖರಾಗುವ ಒಳಗಾಗಿ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಅಲ್ಲದೆ, ಕೋವಿಡ್ ವೈರಸ್ ರಕ್ತದ ಕಣವು ಮೆದುಳಿಗೂ ಹರಿಯುವುದರಿಂದ ಮೆದುಳಿನ ಚಲನ ವಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿ ಪಾರ್ಶ್ವವಾಯು, ಮೂರ್ಛೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನರವಿಜ್ಞಾನ ಸಲಹೆಗಾರರಾದ ಡಾ. ನಿತಿನ್ ಕುಮಾರ್ ಹೇಳಿದ್ದಾರೆ.
ಸ್ಟ್ರೋಕ್, ಫಿಟ್ಸ್ ಬರಬಹುದು ಎಚ್ಚರ:
ಕೋವಿಡ್ ವೈರಸ್‌ನಿಂದಾಗಿ ಮೆದುಳಿಗೆ ಹರಿಯುವ ರಕ್ತನಾಳಗಳು ಸ್ವತಃ ಹಾನಿಯಾಗಿ ರಕ್ತಸ್ರಾವ ಉಂಟಾಗಬಹುದು. ಇದರಿಂದ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಶೇ.10ಕ್ಕೂ ಹೆಚ್ಚು ಜನರು ಕೋವಿಡ್ ಬಳಿಕ ಸ್ಟ್ರೋಕ್ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಮತ್ತೆ ಕೆಲವರು ಕೈ ಕಾಲು ಸ್ವಾಧೀನ ಕಳೆದುಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.