ಕರ್ನಾಟಕ

karnataka

By

Published : Jul 13, 2021, 7:16 AM IST

ETV Bharat / city

ಜೋತು ಬಿದ್ದಿರುವ ಕೇಬಲ್ ತೆರವು ಮಾಡದಿದ್ದರೆ ಕಟ್ಟುನಿಟ್ಟಿನ ಆದೇಶ: ಹೈಕೋರ್ಟ್ ಎಚ್ಚರಿಕೆ

ರಸ್ತೆ ಇಕ್ಕೆಲಗಳಲ್ಲಿ ಹಾಗೂ ಫುಟ್​ಪಾತ್ ಮೇಲೆ ನೇತಾಡುತ್ತಿರುವ ಕೇಬಲ್​ಗಳಿಂದ ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜೋತು ಬಿದ್ದಿರುವ ಕೇಬಲ್ ತೆರವು ಮಾಡದಿದ್ದರೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗುವುದು ಎಂದು ಬಿಬಿಎಂಪಿಗೆ ಎಚ್ಚರಿಕೆ ನೀಡಿದೆ.

High Court Warning
ಜೋತು ಬಿದ್ದಿರುವ ಕೇಬಲ್ ತೆರವು ಮಾಡದಿದ್ದರೆ ಕಟ್ಟುನಿಟ್ಟಿನ ಆದೇಶ: ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು:ನಗರದಾದ್ಯಂತ ರಸ್ತೆಗಳ ಬದಿಗಳಲ್ಲಿ ಜೋತು ಬಿದ್ದಿರುವ ಕೇಬಲ್ ವೈರ್​​ಗಳನ್ನು ತೆರವು ಮಾಡಲು ತ್ವರಿತ ಕ್ರಮ ಕೈಗೊಳ್ಳದಿದ್ದರೆ, ಅವುಗಳನ್ನು ತೆರವುಗೊಳಿಸುವ ಕುರಿತು ಮುಂದಿನ ವಿಚಾರಣೆ ವೇಳೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗುವುದು ಎಂದು ಹೈಕೋರ್ಟ್ ಬಿಬಿಎಂಪಿಗೆ ಎಚ್ಚರಿಕೆ ನೀಡಿದೆ.

ರಸ್ತೆ ಇಕ್ಕೆಲಗಳಲ್ಲಿ ಹಾಗೂ ಫುಟ್​ಪಾತ್ ಮೇಲೆ ನೇತಾಡುತ್ತಿರುವ ಕೇಬಲ್​ಗಳಿಂದ ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಪಾಲಿಕೆ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಹಿಂದಿನ ವಿಚಾರಣೆ ಸಂದರ್ಭದಲ್ಲಿ ಜನರ ಓಡಾಟಕ್ಕೆ ತೊಂದರೆ ಆಗುತ್ತಿರುವ ಕೇಬಲ್ ವೈರ್​ಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಸಹ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿತು. ಇದಕ್ಕೆ ಪಾಲಿಕೆ ಪರ ವಕೀಲರು ಉತ್ತರಿಸಿ, ನಗರದ ಎರಡು ವಲಯಗಳಲ್ಲಿ ಕೇಬಲ್ ತೆರವು ಕಾರ್ಯಾಚರಣೆ ನಡೆದಿದೆ. ಉಳಿದ ಆರು ವಲಯಗಳಲ್ಲಿ ತೆರವುಗೊಳಿಸುವ ಕಾರ್ಯ ಕೈಗೊಂಡು ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿ ಪೀಠ, ನೀವು ಎಲ್ಲಿಯೂ ಕೇಬಲ್ ತೆರವು ಮಾಡುತ್ತಿಲ್ಲ. ತೆರವುಗೊಳಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಂತೆಯೂ ಕಾಣುತ್ತಿಲ್ಲ. ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ಕೇಬಲ್ ಹಾಕಿರುವುದು ಕೂಡ ಪಾದಚಾರಿ ಮಾರ್ಗದ ಒತ್ತುವರಿ ಆಗುತ್ತದೆ. ಹೀಗಾಗಿ, ನ್ಯಾಯಾಲಯ ಪಾದಚಾರಿ ಮಾರ್ಗ ಒತ್ತುವರಿ ತೆರವು ಸಂಬಂಧ ಈಗಾಗಲೇ ಹೊರಡಿಸಿರುವ ಆದೇಶ ಆಧರಿಸಿ ಕೇಬಲ್ ತೆರವಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಲಿದೆ ಎಂದು ತಿಳಿಸಿ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.

ಇದನ್ನೂ ಓದಿ:ಮೇಕೆದಾಟು ಯೋಜನೆ ವಿವಾದ: ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಬಿಎಸ್​ವೈ ಮಹತ್ವದ ಚರ್ಚೆ

ABOUT THE AUTHOR

...view details