ಬೆಂಗಳೂರು: ರಾಜಧಾನಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಾಗೂ ಮಾಸ್ಕ್ ಧರಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ನಗರದ ಶಾಪಿಂಗ್ ಮಾಲ್, ಹೋಟೆಲ್, ಬ್ಯಾಂಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ದಿನದಿಂದ ದಿನಕ್ಕೆ ನಗರ ಹಾಗೂ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಅಧಿಕವಾಗುತ್ತಿದೆ. ಕೊರೊನಾ ವಾರಿಯರ್ಗಳಾಗಿರುವ ಪೊಲೀಸರನ್ನೂ ಕೊರೊನಾ ಬಿಟ್ಟಿಲ್ಲ. ಇಂದು ಸಹ ಕುಮಾರಸ್ವಾಮಿ ಸಂಚಾರಿ ಠಾಣೆಯ ಪೇದೆಗೆ ಕೊರೊನಾ ವಕ್ಕರಿಸಿದೆ. ಸೋಂಕು ಹಬ್ಬದಂತೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಸರ್ಕಾರ ಮನವಿ ಮಾಡುತ್ತಿದ್ದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆಯ ಪೆಟ್ಟು ಎಂಬಂತೆ ನಗರ ಪೊಲೀಸರು ಕಾನೂನು ಅಸ್ತ್ರದ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಮಾಸ್ಕ್ ಧರಿಸದವರ ವಿರುದ್ಧ ಕಾನೂನು ಕ್ರಮ
ನಿನ್ನೆ ಸಹ ಸಿ.ಕೆ.ಅಚ್ಚುಕಟ್ಟು ಪೊಲೀಸರು ಮಾಸ್ಕ್ ಧರಿಸದ ವಾಹನ ಸವಾರರಿಗೆ ವಾರ್ನಿಂಗ್ ಮಾಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರಿಂದ ಮಾರ್ಷಲ್ಗಳು ದಂಡ ಸಂಗ್ರಹಿಸುತ್ತಿದ್ದು, ಮಾಸ್ಕ್ ಧರಿಸದ 1,552 ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 75 ಮಂದಿ ಸೇರಿದಂತೆ ಸುಮಾರು 1,600 ಮಂದಿಯಿಂದ ಒಟ್ಟು 3.19 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.