ಬೆಂಗಳೂರು:ಕೇಂದ್ರದಿಂದ ಹೊಸ ರೂಪದ ಲಾಕ್ಡೌನ್ನ ಮಾರ್ಗಸೂಚಿ ಹೊರಬಿದ್ದಿದ್ದು, ಇದಕ್ಕೆ ಅನುಸಾರವಾಗಿ ರಾಜ್ಯ ಸರ್ಕಾರ ನಾಲ್ಕನೇ ಹಂತದ ಲಾಕ್‌ಡೌನ್ ಅನ್ನು ಇನ್ನಷ್ಟು ಸಡಿಲಿಸಿ ಮಾರ್ಗಸೂಚಿ ಹೊರಡಿಸಲಿದೆ.
ರಾಜ್ಯದಲ್ಲಿ ಲಾಕ್‌ಡೌನ್ 4.0 ಸಡಿಲಿಕೆಯಾಗುತ್ತಾ?: ನಾಳೆ ಸಿಎಂ ಸಭೆಯಲ್ಲಿ ಭವಿಷ್ಯ..
ಕೇಂದ್ರ ಸರ್ಕಾರದ ಹೊಸ ರೂಪದ ಲಾಕ್‌ಡೌನ್ ಮಾರ್ಗಸೂಚಿ ಹೊರಬಿದ್ದಿದ್ದು, ಅದಕ್ಕನುಸಾರವಾಗಿ ರಾಜ್ಯ ಸರ್ಕಾರ ನಾಲ್ಕನೇ ಹಂತದ ಲಾಕ್‌ಡೌನ್ ಅನ್ನು ಇನ್ನಷ್ಟು ಸಡಿಲಿಕೆ ಮಾಡಿ ಮಾರ್ಗಸೂಚಿ ಹೊರಡಿಸುವ ಎಲ್ಲಾ ಸಾಧ್ಯತೆಗಳಿವೆ.
ಕೇಂದ್ರ ಸರ್ಕಾರ ತಮ್ಮ ಹೊಸ ಮಾರ್ಗಸೂಚಿಯಲ್ಲಿ ಕೆಲವು ಚಟುವಟಿಕೆಗಳಿಗೆ ನಿಷೇಧವನ್ನು ಮುಂದುವರೆಸಿದ್ದರೆ, ಇನ್ನು ಕೆಲವು ವಿಚಾರಗಳಿಗೆ ರಾಜ್ಯ ಸರ್ಕಾರಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರವು ಹಲವು ಚಟುವಟಿಕೆಗಳಿಗೆ ಅನುಮತಿ ನೀಡಿ ಮಾರ್ಗಸೂಚಿ ಹೊರಡಿಸಲಿದೆ. ಈಗಾಗಲೇ ಸಿಎಂ ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ಇನ್ನಷ್ಟು ಸಡಿಲಿಕೆ ಮಾಡುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಜೊತೆಗೆ ಸಚಿವರು, ಜಿಲ್ಲಾಧಿಕಾರಿಗಳ ಸಭೆಯಲ್ಲೂ ಈ ಬಗ್ಗೆ ಒಲವು ವ್ಯಕ್ತವಾಗಿದೆ.
ರಾಜ್ಯ ಸರ್ಕಾರವು ಮಂಗಳವಾರದಿಂದ ರಾಜ್ಯದಲ್ಲಿ ಶೇ. 75ರಿಂದ 80ರಷ್ಟು ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲು ಚಿಂತನೆ ನಡೆಸಿದೆ. ಸಮೂಹ ಸಾರಿಗೆ, ಕ್ಯಾಬ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡಲು ಒಲವು ವ್ಯಕ್ತಪಡಿಸಿದೆ. ಕೆಂಪು, ಕಿತ್ತಳೆ, ಹಸಿರು ವಲಯಗಳ ಅಧಿಕಾರವನ್ನು ರಾಜ್ಯಗಳಿಗೆ ನೀಡಿದ್ದರಿಂದ ಕಂಟೇನ್ಮೆಂಟ್ ವಲಯಗಳನ್ನು ಬಿಟ್ಟು ಉಳಿದೆಲ್ಲಾ ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಲು ಮುಂದಾಗಿದೆ.
ಬೆಂಗಳೂರಲ್ಲಿ ಕಂಟೇನ್ಮೆಂಟ್ ವಲಯ ಬಿಟ್ಟು ಇತರೆಡೆ ಮುಕ್ತ
ವಿವಿಧ ವಲಯಗಳ ವರ್ಗೀಕರಣದ ಅಧಿಕಾರ ರಾಜ್ಯಕ್ಕೆ ನೀಡಿರುವುದರಿಂದ ರೆಡ್ ಝೋನ್ನಲ್ಲಿರುವ ಬೆಂಗಳೂರಲ್ಲಿ ಕಂಟೇನ್ಮೆಂಟ್ ಪ್ರದೇಶ ಬಿಟ್ಟು ಉಳಿದೆಲ್ಲಾ ವಲಯಗಳನ್ನು ಗ್ರೀನ್ ಝೋನ್ ಎಂದು ಪರಿಗಣಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೀಗಾಗಿ, ಬೆಂಗಳೂರಲ್ಲಿ ಎಲ್ಲಾ ಚಟುವಟಿಕೆಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಲು ಚಿಂತನೆ ನಡೆಸಿದೆ. ಕಂಟೇನ್ಮೆಂಟ್ ವಲಯದಲ್ಲಿ ಕಠಿಣ ನಿಯಮಗಳು ಇರಲಿದ್ದು, ಉಳಿದೆಡೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಿದ್ದು, ಕೆಲ ಷರತ್ತುಗಳೊಂದಿಗೆ ಲಾಕ್ಡೌನ್ಗೆ ಸಡಿಲಿಕೆ ನೀಡಲಿದೆ ಎನ್ನಲಾಗಿದೆ.
ನಾಳೆ ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ರಾಜ್ಯದ ಮಾರ್ಗಸೂಚಿ ಹೊರಬೀಳಲಿದೆ.
ಏನೆಲ್ಲಾ ಸಡಿಲಿಕೆ ಆಗಬಹುದು?
-ವಾಣಿಜ್ಯ ಚಟುವಟಿಕೆಗೆ ಪೂರ್ಣ ವಿನಾಯತಿ
-ಆನ್‌ಲೈನ್ ಡೆಲಿವರಿ ಸೇವೆ ಪುನರಾರಂಭ ಸಾಧ್ಯತೆ
-ಓಲಾ, ಉಬರ್, ಕ್ಯಾಬ್, ಆಟೋಗಳ ಸಂಚಾರ
-ಬಿಎಂಟಿಸಿ, ಕೆಎಸ್ಆರ್ಟಿಸಿ, ಖಾಸಗಿ ವಾಹನಗಳಿಗೆ ಷರತ್ತುಬದ್ಧ ಓಡಾಟ
-ಎಲ್ಲಾ ಅಂಗಡಿ ಮುಂಗಟ್ಟುಗಳ ವಹಿವಾಟಿಗೆ ಅವಕಾಶ
-ಸಲೂನ್, ಬ್ಯೂಟಿ ಪಾರ್ಲರ್ ತೆರೆಯುವ ಸಾಧ್ಯತೆ
- ಮದ್ಯ ಮಾರಾಟ ಅಬಾಧಿತ
- ಕ್ರೀಡಾಂಗಣ, ಸ್ಟೇಡಿಯಂಗಳ ಕಾರ್ಯಚಟುವಟಿಕೆಗೆ ಅವಕಾಶ
ಯಾವುದಕ್ಕೆ ಅವಕಾಶ ಇರದಿರಬಹುದು?
- ಹೊಟೇಲ್, ರೆಸ್ಟೋರೆಂಟ್, ಪಬ್ಗಿಲ್ಲ ಅವಕಾಶ
- ಮೆಟ್ರೋ ರೈಲು, ವಿಮಾನ ಹಾರಾಟ ಸ್ಥಗಿತ
- ಸಿನಿಮಾ ಥಿಯೇಟರ್, ಉದ್ಯಾನಗಳಿಗೆ ಅವಕಾಶ ಇಲ್ಲ
- ಮಾಲ್, ಜಿಮ್, ಈಜುಕೊಳ, ಬಾರ್ಗಳು ಬಂದ್ ಇರಬಹುದು
- ಶಾಲಾ, ಕಾಲೇಜುಗಳು ಬಂದ್
- ದೇವಾಲಯ, ಮಸೀದಿ, ಚರ್ಚ್ ತೆರೆಯಲ್ಲ
- ಧಾರ್ಮಿಕ ಸಭೆ, ಸಮಾರಂಭ, ಪ್ರಾರ್ಥನೆಗೆ ನಿಷೇಧ
- ಕಂಟೇನ್ಮೆಂಟ್ ಪ್ರದೇಶದಲ್ಲಿ ಎಲ್ಲವೂ ನಿಷೇಧ
- ಸಂಜೆ 7 ರಿಂದ ಬೆಳಗ್ಗೆ 7ರವರೆಗೆ ನಿಷೇಧಾಜ್ಞೆ