ಬೆಂಗಳೂರು: ಕೋವಿಡ್ ನಿಯಂತ್ರಣದ ಸಲುವಾಗಿ 2021ರ ಜನವರಿ 8ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡ್ರೈ ರನ್ ನಡೆದು, ಜನವರಿ 16ರಂದು ಅಂದಿನ ಸಿಎಂ ಯಡಿಯೂರಪ್ಪ ಲಸೀಕಾಕರಣಕ್ಕೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಆಗಿರುವ ಡಿ ಗ್ರೂಪ್ ನೌಕರರಿಗೆ ಲಸಿಕೆ ಕೊಡಲಾಯ್ತು.
ನಂತರ ಹಂತ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ, ಹಿರಿಯ ನಾಗರಿಕರಿಗೆ, ಯುವಕರಿಗೆ ಎರಡು ಡೋಸ್ ಲಸಿಕೆ ನೀಡಲಾಯಿತು. ಇದೀಗ ರೂಪಾಂತರಿ ಒಮಿಕ್ರಾನ್ ತಡೆಯಲು ಹಲವು ತಜ್ಞರು ಬೂಸ್ಟರ್ ಡೋಸ್ಗೆ ಶಿಫಾರಸು ಮಾಡಿದ್ದಾರೆ. ಜನವರಿ 10ರಿಂದ ಅಂದರೆ ನಾಳೆಯಿಂದ ರಾಜ್ಯವ್ಯಾಪಿ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ.
ಇದೇ ತಿಂಗಳ ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲು ಆರಂಭಿಸಲಾಯಿತು. ಇದೀಗ ಹಂತ ಹಂತವಾಗಿ ಬೂಸ್ಟರ್ ಡೋಸ್ ನೀಡಲು ಸರ್ಕಾರ ಮುಂದಾಗಿದೆ. ಬೂಸ್ಟರ್ ಡೋಸ್ ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ತಯಾರಿ ನಡೆದಿದೆ.
ಬೆಂಗಳೂರಿನಲ್ಲಿ ಸಿಎಂ ಚಾಲನೆ :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಾಳೆ ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಈ ಲಸಿಕಾಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಯಾರೆಲ್ಲಾ ಅರ್ಹರು?
- ಆರೋಗ್ಯ ಕಾರ್ಯಕರ್ತರು.
- ಮುಂಚೂಣಿ ಕಾರ್ಯಕರ್ತರು.
- 60 ವರ್ಷ ಮೇಲ್ಪಟ್ಟ ಕೋಮಾರ್ಬಿಡಿಟೀಸ್ ಸಮಸ್ಯೆ ಇರುವವರು.
ಬೂಸ್ಟರ್ ಡೋಸ್ ಪಡೆಯುವ ವಿಧಾನ :
- ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಿದಂತೆ ಎರಡು ಡೋಸ್ ಪಡೆದಿರಬೇಕು.
- ಎರಡನೇ ಡೋಸ್ ಪಡೆದು 9 ತಿಂಗಳು (39 ವಾರಗಳಾಗಿರಬೇಕು)ಆಗಿರಬೇಕು.
- ಎರಡು ಡೋಸ್ ಪಡೆದಿರುವ ಬಗ್ಗೆ ಮಾಹಿತಿ ಒದಗಿಸಬೇಕು.