ಬೆಂಗಳೂರು: ರಾಜ್ಯದ ಪ್ರಥಮ ಕ್ರೀಡಾ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಯಲಹಂಕದಲ್ಲಿ 100 ಎಕರೆ ಜಮೀನು ಗುರುತಿಸಲಾಗಿದೆ. 65 ಎಕರೆಯನ್ನು ಈಗಾಗಲೇ ಸರ್ಕಾರದ ವಶಕ್ಕೆ ಪಡೆಯಲಾಗಿದೆ. 35 ಎಕರೆ ಪಡೆಯಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ಜಕ್ಕೂರು ಏರೋಡ್ರೋಮ್‍ನಲ್ಲಿ 100 ಮಕ್ಕಳಿಗೆ ಪೈಲಟ್ ತರಬೇತಿ ಕೊಡಲಾಗುವುದು. 6 ಏರ್ಕ್ರಾಪ್ಟ್ಗಳಲ್ಲಿ 3 ಪೈಲಟ್‍ಗಳು ತರಬೇತಿ ಕೊಡುತ್ತಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ 504 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಖೇಲೋ ಇಂಡಿಯಾ ಉದ್ಘಾಟನೆಯಾಗಿದ್ದು, ನಾಲ್ಕು ಕಡೆ ವಿವಿಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಅಮೃತ ಕ್ರೀಡಾ ದತ್ತು ಯೋಜನೆಯಡಿ 75 ಮಕ್ಕಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಲು ಯೋಜನೆ ಮಾಡುತ್ತಿದ್ದೇವೆ. ಹಳೇ ಕುಸ್ತಿಪಟುಗಳ ಮಾಸಾಶನವನ್ನು 1 ಸಾವಿರ ಹೆಚ್ಚಿಸಲಾಗಿದೆ. ಗ್ರಾಮೀಣ ಗರಡಿ ಮನೆಗಳ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕಂಠೀರವ ಸ್ಟುಡಿಯೋದಲ್ಲಿ ಹಾಳಾಗಿದ್ದ ಸಿಂಥೆಟಿಕ್ ಟ್ರ್ಯಾಕ್ ಅನ್ನು ಮರುನಿರ್ಮಿಸಲು 5 ಕೋಟಿ ವೆಚ್ಚ ಮಾಡಲಾಗುತ್ತಿದೆ.