ಕರ್ನಾಟಕ

karnataka

ETV Bharat / city

ಪ್ರಶ್ನೆ ಕೇಳಲು ಅವಕಾಶ ನೀಡದ ಸ್ಪೀಕರ್: ಧರಣಿಗೆ ಮುಂದಾದ ಕಾಂಗ್ರೆಸ್ ಸದಸ್ಯರು - ವಿಧಾನಸಭೆ ಮರಳು ನೀತಿ ಬಗ್ಗೆ ಚರ್ಚೆ

ಮರಳು ನೀತಿ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರಾದ ಯು.ಟಿ.ಖಾದರ್ ಹಾಗೂ ಅಮರೇಗೌಡ ಬೈಯ್ಯಾಪುರ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.

State Legislative assembly session
ವಿಧಾನಸಭೆಯಲ್ಲಿ ಮರಳು ನೀತಿ ಬಗ್ಗೆ ಚರ್ಚೆ

By

Published : Mar 20, 2020, 3:30 PM IST

ಬೆಂಗಳೂರು: ಮರಳು ನೀತಿ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರಾದ ಯು.ಟಿ.ಖಾದರ್ ಹಾಗೂ ಅಮರೇಗೌಡ ಬೈಯ್ಯಾಪುರ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.

ವಿಧಾನಸಭೆಯಲ್ಲಿ ಮರಳು ನೀತಿ ಬಗ್ಗೆ ಚರ್ಚೆ

ಸದನ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡಿದರು. ಹಾಗಾಗಿ, ಬಿಜೆಪಿ ಸದಸ್ಯ ಸಂಜೀವ ಮಠಂದೂರು ಅವರು ಹೊಸ ಮರಳು ನೀತಿ ಜಾರಿ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ಪೂರಕವಾಗಿ ಪ್ರಶ್ನೆ ಕೇಳಿದ ಮುಖ್ಯ ಸಚೇತಕ ಸುನೀಲ್ ಕುಮಾರ್, ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗಿ ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಆಗ ಕಾಂಗ್ರೆಸ್ ಸದಸ್ಯರಾದ ಯು.ಟಿ. ಖಾದರ್ ಹಾಗೂ ಅಮರೇಗೌಡ ಬೈಯ್ಯಾಪುರ ಅವರು ಪ್ರಶ್ನೆ ಕೇಳಲು ಮುಂದಾದಾಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಇದು ಕರಾವಳಿಗೆ ಸೀಮಿತವಾದ ಪ್ರಶ್ನೆ, ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಹಾಗಾಗಿ, ಉಪ ಪ್ರಶ್ನೆಗೆ ಅವಕಾಶವಿಲ್ಲ ಎಂದರು.

ಇದರಿಂದ ಅಸಮಾಧಾನಗೊಂಡ ಯು.ಟಿ.ಖಾದರ್ ಹಾಗೂ ಬೈಯ್ಯಾಪುರ ಅವರು ಸದನ ಬಾವಿಗಿಳಿದು ಪ್ರಶ್ನೆ ಕೇಳಲು ಅವಕಾಶ ನೀಡಬೇಕೆಂದು ಪಟ್ಟುಹಿಡಿದರು. ಇದಕ್ಕೆ ಮತ್ತಷ್ಟು ಗರಂ ಆದ ಸ್ಪೀಕರ್, ಸದಸ್ಯರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ, ನಾನು ನಿಮ್ಮ ಬಗ್ಗೆ ಉದಾರವಾಗಿದ್ದೇನೆ ಎಂದು ಇಲ್ಲಿತನಕ ಬಂದಿದ್ದೀರಿ. ನನ್ನ ಉದಾರತೆಯನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ಗರಂ ಆಗಿ ಹೇಳಿದರು.

ಮಧ್ಯಪ್ರವೇಶಿಸಿದ ಸಚಿವ ಜಗದೀಶ್ ಶೆಟ್ಟರ್, ಅಶೋಕ್ ಅರ್ಧಗಂಟೆಗಳ ಕಾಲ ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು. ಆಗ ಮರಳು ವಿಷಯಕ್ಕೆ ಸಂಬಂಧಿಸಿದಂತೆ ಅರ್ಧಗಂಟೆ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸದಸ್ಯರು ಧರಣಿ ವಾಪಸ್ ಪಡೆದರು.

ಇದಕ್ಕೂ ಮುನ್ನ ಶಾಸಕ ಸಂಜೀವ ಮಠಂದೂರು ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ್, ರಾಜ್ಯದಲ್ಲಿ ನೂತನ ಮರಳು ನೀತಿ ಜಾರಿಗೆ ತರಲು ಸರ್ಕಾರ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು. ಸಿಆರ್​ಝಡ್ ಪ್ರದೇಶಗಳ ಸಮಸ್ಯೆ ಬಗೆಹರಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ನಿರ್ಬಂಧಿತ ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಸದನಕ್ಕೆ ತಿಳಿಸಿದರು.

ABOUT THE AUTHOR

...view details