ಬೆಂಗಳೂರು: ರಾಜ್ಯದ ಮೃಗಾಲಯಗಳಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಕೊರೊನಾ ವೈರಸ್ ಸೋಂಕು ಹರಡದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ವರದಿ ನೀಡಿದೆ.
ಕೊರೊನಾ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುವ ವೇಳೆ ಮೃಗಾಲಗಳಲ್ಲಿರುವ ಪ್ರಾಣಿ ಪಕ್ಷಿಗಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿ ಸರ್ಕಾರದ ಪರ ವಕೀಲರು, ರಾಜ್ಯದಲ್ಲಿರುವ 8 ಮೃಗಾಲಯಗಳಲ್ಲಿ ಒಟ್ಟು 5247 ಪ್ರಾಣಿಗಳಿವೆ. ಈ ಪ್ರಾಣಿಗಳಿಗೆ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಮಾ.15 ರಿಂದ ಮೃಗಾಲಯಕ್ಕೆ ಜನರು ಬರುವುದನ್ನು ನಿರ್ಬಂಧಿಸಲಾಗಿದೆ. ಈ ಮೂಲಕ ಕೊರೋನಾ ಸೋಂಕಿತರು ಪ್ರಾಣಿಗಳತ್ತ ಸುಳಿಯದಂತೆ ಕ್ರಮ ವಹಿಸಲಾಗಿದೆ. ಮೃಗಾಲಯಗಳ ಪ್ರವೇಶ ದ್ವಾರದಲ್ಲಿ ರೋಗಾಣು ನಿರೋಧಕ ದ್ರಾವಣವನ್ನು ಪ್ರತಿದಿನ ಸಿಂಪಡಿಸಲಾಗುತ್ತಿದೆ. ಮೃಗಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಪಾದರಕ್ಷೆ ಮತ್ತು ಒಳಬರುವ ವಾಹನಗಳ ಟೈರ್ ಗಳಿಗೂ ರೋಗಾಣು ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ ಎಂದರು.
ಅಲ್ಲದೇ ಪ್ರಾಣಿಗಳ ಆರೈಕೆ ಮಾಡುವ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ. ಪ್ರಾಣಿಗಳಿರುವ ಕೋಣೆಗಳಿಗೂ ಪ್ರತಿನಿತ್ಯ ಸ್ಯಾನಿಟೈಸ್ ಮಾಡಲಾಗುತ್ತಿದೆ. ಪ್ರಾಣಿ ಪಕ್ಷಿಗಳಿಗೆ ಪರೀಕ್ಷಿಸಿದ ನಂತರವೇ ಆಹಾರ ಪೂರೈಸಲಾಗುತ್ತಿದೆ. ಉಳಿದಂತೆ ರಾಜ್ಯದಲ್ಲಿರುವ ಆನೆ ಶಿಬಿರಗಳಲ್ಲಿಯೂ ಕೊರೊನಾ ಬಾರದಂತೆ ಕ್ರಮ ವಹಿಸಲಾಗಿದೆ. ಈ ಕುರಿತು ದೇವಾಲಯ, ಮಠಗಳಿಗೂ ಮಾರ್ಗಸೂಚಿ ನೀಡಲಾಗಿದೆ. ಆನೆಗಳ ನಡುವೆ 50 ಮೀ. ಅಂತರ ಕಾಯ್ದುಕೊಳ್ಳಲಾಗಿದೆ. ಆನೆಗಳ ಉಸಿರಾಟ, ಕೆಮ್ಮಿನ ಬಗ್ಗೆಯೂ ನಿರಂತರ ಗಮನ ಹರಿಸಲಾಗುತ್ತಿದೆ.
ಒಂದು ವೇಳೆ ಯಾವುದೇ ಅನಾರೋಗ್ಯ ಲಕ್ಷಣ ಕಂಡುಬಂದರೆ ಚಿಕಿತ್ಸೆಗೂ ಸಿದ್ದತೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಮಾವುತರು, ಕಾವಾಡಿಗಳನ್ನೂ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದರು.