ಬೆಂಗಳೂರು: ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ 4,000 ಮೆಗಾವ್ಯಾಟ್ ಸಾಮರ್ಥ್ಯದ ಎರಡು ವಿದ್ಯುತ್ ಸ್ಥಾವರಗಳನ್ನು ಖಾಸಗಿಯವರಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಅದಾನಿ ಗ್ರೂಪ್ ಪಾಲಾಗುವ ಸಾಧ್ಯತೆಗಳಿದ್ದು, ಮುಂದಿನ ಕೆಲ ದಿನಗಳಲ್ಲಿ ಈ ಕುರಿತ ಎಂಒಯುಗೆ ಸಹಿ ಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ ತಲಾ 500 ಮೆಗಾವ್ಯಾಟ್ ಸಾಮರ್ಥ್ಯದ ಆರು ಘಟಕಗಳಿದ್ದು, ಒಟ್ಟು 3,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಇದೇ ರೀತಿ ಬಳ್ಳಾರಿಯಲ್ಲಿ ತಲಾ 500 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳಿದ್ದು, ಒಟ್ಟು 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ಆದರೆ, ದಿನ ಕಳೆದಂತೆ ಈ ಸ್ಥಾವರಗಳನ್ನು ನಿರ್ವಹಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಖಾಸಗಿಯವರಿಗೆ ವಹಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ವಿದ್ಯುತ್ ಸ್ಥಾವರಗಳನ್ನು ಖಾಸಗಿಯವರಿಗೆ ವಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ದೆಹಲಿಯ ಕೆಲ ಪ್ರಭಾವಿ ನಾಯಕರು ಇದರಲ್ಲಿ ಮಧ್ಯ ಪ್ರವೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಯಚೂರು ಹಾಗೂ ಬಳ್ಳಾರಿ ವಿದ್ಯುತ್ ಸ್ಥಾವರಗಳನ್ನು ನಿರ್ವಹಿಸಲು ಖಾಸಗಿಯವರಿಗೆ ವಹಿಸಿಕೊಡುವುದು. ಬಂದ ಲಾಭದಲ್ಲಿ ಶೇಕಡಾವಾರು ಪಾಲು ಮಾಡಿಕೊಳ್ಳುವುದು ಸರ್ಕಾರದ ಉದ್ದೇಶ. ಇದಕ್ಕೆ ಪೂರಕವಾಗಿ ಎರಡೂ ಸ್ಥಾವರಗಳಲ್ಲಿ ಸರ್ಕಾರಿ ನೇಮಕಾತಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ಉನ್ನತ ಮೂಲಗಳ ಹೇಳಿಕೆ.
ಈಗಿನ ಮಾಹಿತಿಯ ಪ್ರಕಾರ ರಾಯಚೂರು ಹಾಗೂ ಬಳ್ಳಾರಿಯ ಒಟ್ಟು 8 ಘಟಕಗಳಲ್ಲಿ ಮೂರು ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ವಿಳಂಬ ಮಾಡುತ್ತಲೇ ಇರಲಿಲ್ಲ. ಆದರೆ, ಇದೀಗ ಈ ಸ್ಥಾವರಗಳು ಖಾಸಗಿಯವರ ಕೈ ಸೇರುತ್ತಿರುವುದರಿಂದ ನೇಮಕಾತಿಗಳನ್ನು ಸ್ಥಗಿತಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸ್ಥಾವರಗಳನ್ನು ನಿರ್ವಹಣೆಗೆ ಎಂದು ವಹಿಸಿಕೊಳ್ಳುವ ಸಂಸ್ಥೆಯೇ ನೇಮಕಾತಿ ಪ್ರಕ್ರಿಯೆ ನಡೆಸಲಿದೆ.
ಇದನ್ನೂ ಓದಿ:ಮೋದಿ-ಬೊಮ್ಮಾಯಿ ಸರ್ಕಾರಗಳ ವಿಕಾಸ ನೋಡಿ ಜನ ಮುಂದೆಯೂ ಬಿಜೆಪಿ ಗೆಲ್ಲಿಸುತ್ತಾರೆ : ಅರುಣ್ ಸಿಂಗ್
ಸದ್ಯದ ಪರಿಸ್ಥಿತಿಯಲ್ಲಿ ಸಿಂಗರೇಣಿ ಸೇರಿದಂತೆ ಹಲವೆಡೆ ಪ್ರಮುಖ ಕಲ್ಲಿದ್ದಲ ಗಣಿಗಳನ್ನು ಪಡೆದಿರುವ ಅದಾನಿ ಗ್ರೂಪ್ ಈ ಎರಡೂ ಸ್ಥಾವರಗಳನ್ನು ವಹಿಸಿಕೊಳ್ಳಲು ಆಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ.