ಬೆಂಗಳೂರು: ಮುಷ್ಕರದ ವೇಳೆ ವಜಾ ಮಾಡಿರುವ ನಾಲ್ಕೂ ಸಾರಿಗೆ ನಿಗಮಗಳ ಎಲ್ಲ ನೌಕರರನ್ನು ಮತ್ತೆ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ನೌಕರರ ಕೂಟದ ಅಧ್ಯಕ್ಷರಿಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದರು.
ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರದಲ್ಲಿ ನಿರತರಾದ ಸಾವಿರಾರು ನೌಕರರ ವಿರುದ್ಧ ಶಿಸ್ತು ಕ್ರಮ/ವಜಾಗೊಳಿಸಿರುವ ಪ್ರಕರಣ ಬಗ್ಗೆ ಚರ್ಚಿಸುವ ಸಲುವಾಗಿ ಇಂದು ಮಧ್ಯಾಹ್ನ 2.30ಕ್ಕೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಾರಿಗೆ ಸಚಿವರ ಕೊಠಡಿಯಲ್ಲಿ ಸಭೆ ನಡೆಯಿತು.
ಈ ಸಭೆ ಬಳಿಕ ಸಚಿವರು ತಮ್ಮನ್ನು ಭೇಟಿಯಾದ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮತ್ತು ಪದಾಧಿಕಾರಿಗಳಿಗೆ ಇದೇ ಜನವರಿ 9ರಂದು ವಜಾಗೊಂಡಿರುವ ಎಲ್ಲ ನೌಕರರನ್ನು ತೆಗೆದುಕೊಳ್ಳುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ ವಜಾಗೊಂಡಿರುವ ಎಲ್ಲ ನೌಕರರನ್ನು ತೆಗೆದುಕೊಳ್ಳುವ ಬಗ್ಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಆದರೆ, ಆ ನೌಕರರಿಗೆ ಶಿಕ್ಷೆ ವಿಧಿಸಿ ತೆಗೆದುಕೊಳ್ಳಬೇಕೋ ಅಥವಾ ಯಾವುದೇ ಶಿಕ್ಷೆ ನೀಡದೇ ಮರುನೇಮಕ ಮಾಡಿಕೊಳ್ಳಬೇಕೋ ಎನ್ನುವುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿರುವುದರಿಂದ ಜನವರಿ 9ರಂದು ಮತ್ತೆ ಸಭೆ ಕರೆದಿದ್ದು, ಅಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:2013 ರಿಂದ 2019ರವರೆಗೆ ಕಾಂಗ್ರೆಸ್ ಸರ್ಕಾರದಿಂದ ಮೇಕೆದಾಟು ಅನುಷ್ಠಾನ ವಿಳಂಬ: ಕಾರಜೋಳ
ವಜಾಗೊಂಡಿರುವ ನಾಲ್ಕೂ ಸಾರಿಗೆ ನಿಗಮಗಳ 1,600ಕ್ಕೂ ಹೆಚ್ಚು ನೌಕರರಿಗೂ ಇಂದು ಸಚಿವ ಶ್ರೀರಾಮುಲು ಸಿಹಿ ಸುದ್ದಿ ನೀಡಿದ್ದು, ಎಲ್ಲ ನೌಕರರನ್ನು ಮರು ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಾರಿಗೆ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದರು.