ಕರ್ನಾಟಕ

karnataka

ETV Bharat / city

Omicron scare.. ಸಚಿವಾಲಯ ಸಿಬ್ಬಂದಿಗೆ ಹೊಸ ಕಾರ್ಯಸೂಚಿ ಹೊರಡಿಸಿದ ರಾಜ್ಯ ಸರ್ಕಾರ - ರಾಜ್ಯ ಸರ್ಕಾರದಿಂದ ಸಚಿವಾಲಯ ಸಿಬ್ಬಂದಿಗೆ ಹೊಸ ರೂಲ್ಸ್​

New work guidelines for ministry staff: ಸಚಿವಾಲಯದ ಮುಖ್ಯಮಂತ್ರಿ ಕಚೇರಿ, ಸಚಿವರು ಮತ್ತು ಸಚಿವಾಲಯದ ಇಲಾಖೆಗಳಿಂದ ಮುಂಚಿತವಾಗಿ ನಿಗದಿಪಡಿಸಲಾಗಿರುವ, ಭೇಟಿಗೆ ಆಗಮಿಸುವ ಇಲಾಖೆ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ಸರ್ಕಾರ ಹೊಸ ಕಾರ್ಯಸೂಚಿಯನ್ನು ಹೊರಡಿಸಿದೆ.

ministry
ಸಚಿವಾಲಯ

By

Published : Jan 5, 2022, 8:56 PM IST

ಬೆಂಗಳೂರು:ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ಒಮಿಕ್ರಾನ್ ವೈರಸ್ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ರಾಜ್ಯ ಸರ್ಕಾರ ಹೊಸ ಕಾರ್ಯಸೂಚಿಯನ್ನು ಹೊರಡಿಸಿದೆ.

ಸಚಿವಾಲಯದ ಮುಖ್ಯಮಂತ್ರಿ ಕಚೇರಿ, ಸಚಿವರು ಮತ್ತು ಸಚಿವಾಲಯದ ಇಲಾಖೆಗಳಿಂದ ಮುಂಚಿತವಾಗಿ ನಿಗದಿಪಡಿಸಲಾಗಿರುವ, ಭೇಟಿಗೆ ಆಗಮಿಸುವ ಇಲಾಖೆ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು. ಒಂದು ವೇಳೆ ಯಾವುದೇ ಸಿಬ್ಬಂದಿ ಗೈರು ಹಾಜರಾದರೆ ವೇತನ ರಹಿತ ರಜೆ ಎಂದು ಪರಿಗಣಿಸುವುದಾಗಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಾಮಾನ್ಯ ಭೇಟಿಗೆ ನಿರ್ಬಂಧ:

ಸಾಮಾನ್ಯ ಭೇಟಿಗೆ ಪ್ರವೇಶವನ್ನು ತಕ್ಷಣ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ. ಸಚಿವಾಲಯದ ಕಟ್ಟಡಗಳಿಗೆ ಆಗಮಿಸುವವರು ಪರ್ವಾನುಮತಿ ಪತ್ರ, ಸಭಾಸೂಚನಾ ಪತ್ರ ಹಾಗೂ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಖಚಿತಪಡಿಸಿಕೊಂಡು, ನಂತರವೇ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸೂಚಿಸಿದ್ದಾರೆ.

ಸಚಿವಾಲಯದಲ್ಲಿ ಅಗತ್ಯ ಸೇವೆ ಒದಗಿಸುತ್ತಿರುವ ಎಲ್ಲ ವರ್ಗದ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಎ ವೃಂದದ ಎಲ್ಲಾ ಅಧಿಕಾರಿಗಳು ಕಚೇರಿಗೆ ಹಾಜರಾಗಬೇಕು. ಗ್ರೂಪ್ ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ ಮತ್ತು ಸಿಬ್ಬಂದಿ ಶೇ.50ರಷ್ಟು ಸಿಬ್ಬಂದಿ ರೋಟೆಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಬರಬೇಕು.

ಹಾಜರಾತಿಯಿಂದ ವಿನಾಯಿತಿ ನೀಡಲ್ಪಟ್ಟ ಇಲಾಖೆಯ ಕಾರ್ಯದರ್ಶಿ, ಮುಖ್ಯಸ್ಥರು ಇಚ್ಛಿಸಿದಲ್ಲಿ ಅವರು ಬಯಸುವ ಅಧಿಕಾರಿ, ನೌಕರರು ಯಾವುದೇ ಕಾರಣ ನೀಡದೆ ಕಚೇರಿಗೆ ಬರಬೇಕು. ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು, ಸಿಬ್ಬಂದಿ ತಪ್ಪದೆ ಕರ್ತವ್ಯಕ್ಕೆ ಹಾಜರಿರಬೇಕು. ದೃಷ್ಟಿಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ, ಸಿಬ್ಬಂದಿ ಮತ್ತು ಗರ್ಭಿಣಿ ಸಿಬ್ಬಂದಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಈ ಸುತ್ತೋಲೆಯು ಜನವರಿ 18 ರವರೆಗೆ ಅಸ್ತಿತ್ವದಲ್ಲಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ವಿಧಾನಸೌಧ, ವಿಕಾಸಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

ಸಚಿವಾಲಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಆರೋಗ್ಯ ಮತ್ತು ಆಡಳಿತದ ಹಿತದೃಷ್ಟಿಯಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಯಂತ್ರಿಸುವ ಅನಿವಾರ್ಯತೆ ಇದೆ. ಆದ್ದರಿಂದ ಸಾಮಾನ್ಯ ಭೇಟಿಗೆ ಸಾರ್ವಜನಿಕರ ಪ್ರವೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ.

ಈ ಸಂಬಂಧ ಪೊಲೀಸ್ ಇಲಾಖೆ, ಸ್ವಾಗತ ಕೇಂದ್ರ ಮತ್ತು ಭದ್ರತಾಧಿಕಾರಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಕಾರ್ಯಕಾರಿ) ಸಚಿವಾಲಯ ಕಟ್ಟಡಗಳಿಗೆ ಆಗಮಿಸುವ ಇಲಾಖೆ, ಕಚೇರಿಗಳಿಂದ ನೀಡಲಾಗುವ ಪೂರ್ವಾನುಮತಿ ಪತ್ರ, ಸಭಾ ಸೂಚನಾ ಪತ್ರ ಹಾಗೂ 2 ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರುವ ಪ್ರಮಾಣ ಪತ್ರವನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಪ್ರವೇಶಕ್ಕೆ ಅನುಮತಿ ನೀಡಬೇಕು. ಸಚಿವಾಲಯದ ಕಟ್ಟಡಗಳಲ್ಲಿನ ಪ್ರತಿಯೊಂದು ಮಹಡಿ, ಕಾರಿಡಾರ್​ನಲ್ಲಿ ಗುಂಪು ಸೇರದಂತೆಯೂ ಸೂಚಿಸಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಮುಂದುವರೆದ ಕೊರೊನಾ ಆರ್ಭಟ; ಮತ್ತೆ ಡಬಲ್​ ಆಯ್ತು ಸೋಂಕಿತರ ಸಂಖ್ಯೆ!

ABOUT THE AUTHOR

...view details