ಬೆಂಗಳೂರು:ಕೊರೊನಾ ಭೀತಿಯಿಂದ ಜನರು ಮಾಸ್ಕ್ಗಳನ್ನ ಮುಗಿಬಿದ್ದು ಖರೀದಿಸಲು ಆರಂಭಿಸಿದಂತೆ, ನಕಲಿ ಮಾಸ್ಕ್ಗಳ ಮಾರಾಟ ಹಾವಳಿಯೂ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ, ನಕಲಿ ಮಾಸ್ಕ್ ಮಾರಾಟ ಮಾಡುತ್ತಿದ್ದವರು ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದವರ ವಿರುದ್ಧ ಅಧಿಕಾರಿಗಳು ನಿರಂತರ ದಾಳಿ ನಡೆಸಿದ್ದರು. ಈ ಕುರಿತ ವರದಿಯನ್ನು ಸರ್ಕಾರ ಇದೀಗ ಹೈಕೋರ್ಟ್ಗೆ ಸಲ್ಲಿಸಿದೆ.
ನಕಲಿ ಮಾಸ್ಕ್ ಮಾರಾಟ ಮಾಡುತ್ತಿದ್ದವರಿಗೆ 13.37 ಲಕ್ಷ ರೂ. ದಂಡ: ಹೈಕೋರ್ಟ್ಗೆ ರಾಜ್ಯ ಸರ್ಕಾರದ ವರದಿ - Bangalore News
ಲಾಕ್ಡೌನ್ ಜಾರಿಯಾದ ಮಾರ್ಚ್ 24ರಿಂದ ಈವರೆಗೆ ನಕಲಿ ಮಾಸ್ಕ್ ಮಾರಾಟ ಮಾಡುತ್ತಿದ್ದವರು ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದವರ ಕುರಿತ ವರದಿಯನ್ನ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿದೆ.
![ನಕಲಿ ಮಾಸ್ಕ್ ಮಾರಾಟ ಮಾಡುತ್ತಿದ್ದವರಿಗೆ 13.37 ಲಕ್ಷ ರೂ. ದಂಡ: ಹೈಕೋರ್ಟ್ಗೆ ರಾಜ್ಯ ಸರ್ಕಾರದ ವರದಿ State Government gave to Fake Mask Sales report to highcourt](https://etvbharatimages.akamaized.net/etvbharat/prod-images/768-512-7867893-1031-7867893-1593710818531.jpg)
ರಾಜ್ಯ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿರುವ ಮಾಹಿತಿಯಂತೆ, ರಾಜ್ಯದಲ್ಲಿ ಅಕ್ರಮವಾಗಿ ಹಾಗೂ ಅಧಿಕ ದರಕ್ಕೆ ಮಾಸ್ಕ್ ಮಾರಾಟ ಮಾಡುತ್ತಿದ್ದ 6,958 ಮೆಡಿಕಲ್ ಶಾಪ್ಗಳ ಮೇಲೆ ದಾಳಿ ನಡೆಸಿದ್ದಾರೆ. ಹೆಚ್ಚು ಬೆಲೆಗೆ ಮಾರಾಟ ಮಾಡಿದ ಆರೋಪದಡಿ ಮೆಡಿಕಲ್ ಶಾಪ್ ಮಾಲೀಕರಿಂದ ಒಟ್ಟು 13.37 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಕೊರೊನಾ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿದ್ದ ಪಿಐಎಲ್ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಈ ಮಾಹಿತಿ ನೀಡಿದೆ.
ಲಾಕ್ಡೌನ್ ಜಾರಿಯಾದ ಮಾರ್ಚ್ 24ರಿಂದ ಮೇ ತಿಂಗಳ ಅಂತ್ಯದವರೆಗೆ ರಾಜ್ಯದ ಹತ್ತು ವಲಯಗಳಲ್ಲಿ ಅಕ್ರಮವಾಗಿ ಮಾಸ್ಕ್ಗಳನ್ನು ದಾಸ್ತಾನು ಮಾಡಲಾಗಿತ್ತು. ಹೀಗೆ ಮಾಸ್ಕ್ ಗಳನ್ನು ಅಕ್ರಮ ದಾಸ್ತಾನು ಮಾಡಿದ್ದವರು ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದ ಮೆಡಿಕಲ್ ಶಾಪ್ಗಳ ಮೇಲೆ ದಾಳಿ ಮಾಡಲಾಗಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು 6,958 ಕಡೆ ದಾಳಿ ನಡೆಸಿ, 335 ಪ್ರಕರಣಗಳನ್ನು ದಾಖಲಿಸಿದ್ದಾರೆ. ಜೊತೆಗೆ 13.37 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಹೈಕೋರ್ಟ್ಗೆ ಮಾಹಿತಿ ನೀಡಲಾಗಿದೆ.
2020ರ ಮಾರ್ಚ್ 21ರಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಸ್ಕ್ಗಳಿಗೆ ದರ ನಿಗದಿಪಡಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದ ಮಾರಾಟಗಾರರು ಮಾಸ್ಕ್, ಸ್ಯಾನಿಟೈಸರ್ಗಳಿಗೆ ಅಧಿಕ ದರ ವಿಧಿಸುತ್ತಿದ್ದರು. ಗ್ರಾಹಕರನ್ನ ವಂಚಿಸುತ್ತಿರುವ ಕುರಿತು ದೂರುಗಳು ಬಂದ ಬಳಿಕ ಕಾನೂನುಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು, ಅಕ್ರಮ ಮಾರಾಟದ ವಿರುದ್ಧ ರಾಜ್ಯದೆಲ್ಲೆಡೆ ನಿರಂತರ ದಾಳಿ ನಡೆಸಿ ದಂಡ ವಿಧಿಸಿದ್ದರು.