ಬೆಂಗಳೂರು: ಗೋವಿನ ಸಾಂಪ್ರದಾಯಿಕ ಉತ್ಪನ್ನಗಳ ಜೊತೆಗೆ ನೂತನ ಉಪ ಉತ್ಪನ್ನಗಳ ತಯಾರಿಕೆಗೆ ರಾಜ್ಯ ಸರ್ಕಾರ ಒತ್ತು ನೀಡಲು ಮುಂದಾಗಿದೆ. ಫಲಾನುಭವಿಗಳಿಗೆ ಸಹಾಯಧನ, ಸಾಲದ ನೆರವು, ಪ್ರೋತ್ಸಾಹಧನ, ಘಟಕ ವೆಚ್ಚ ನೀಡುವ ಮೂಲಕ ಯೋಜನೆಗಳನ್ನು ಯಶಸ್ವಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿಯೇ 2022-23ನೇ ಸಾಲಿನಲ್ಲಿ ಸುಮಾರು 32 ಕೋಟಿ ರೂ.ಭರಿಸಲಿದೆ. ಈ ಸಾಲಿನಲ್ಲಿ ಸರ್ಕಾರ 31 ಖಾಸಗಿ ಗೋ ಶಾಲೆಗಳಿಗೆ 7.75 ಕೋಟಿ ರೂ. ಆರ್ಥಿಕ ನೆರವು ನೀಡಲಿದೆ. ಘಟಕ ವೆಚ್ಚ 25 ಲಕ್ಷ ರೂ. ನಿಗದಿಪಡಿಸಿ, ಶೇ.75ರಷ್ಟು ಸಹಾಯಧನ ನೀಡಲಾಗುತ್ತದೆ.
ಗೋ ಶಾಲೆಗಳಲ್ಲಿ ಉತ್ಪತ್ತಿಯಾಗುವ ಸಗಣಿ, ಗಂಜಲ ಮತ್ತು ಇತರೆ ಉತ್ಪನ್ನ ಬಳಸಿ ಪರಿಸರ ಸ್ನೇಹಿ ಸಗಣಿ ಕಟ್ಟಿಗೆ, ಧೂಪ, ಫಿನಾಯಿಲ್, ಗಣಪತಿ, ಪಂಚಗವ್ಯ, ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡಲು ಖಾಸಗಿ ಗೋ ಶಾಲೆಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಇದಕ್ಕೆ 'ಆತ್ಮನಿರ್ಭರ ಗೋಶಾಲೆ' ಎಂದು ಹೆಸರಿಡಲಾಗಿದೆ.
ಗೋ ಉತ್ಪನ್ನಗಳು: ಹಾಲು, ಬೆಣ್ಣೆ, ತುಪ್ಪ ತಯಾರಿಕೆ ಪ್ರಮುಖವಾದದ್ದು. ಸಾವಯವ ಗೊಬ್ಬರ, ಗೋಬರ್ ಗ್ಯಾಸ್ ಹಾಗೂ ಗವ್ಯ ಉತ್ಪನ್ನಗಳಾದ ಪಂಚ ಗವ್ಯ, ಅಗ್ನಿ ಗವ್ಯ, ಗೋಮೂತ್ರದಿಂದ ಸೋಪು, ಶಾಂಪು ತಯಾರಿಕೆ ಮತ್ತು ಸಗಣಿಯಿಂದ ಆಯಿಲ್ ಪೇಂಟ್ ತಯಾರಿಸಲಾಗುತ್ತದೆ. ಗೋವಿನ ಸಗಣಿಯಿಂದ ಹಣತೆ, ಧೂಪ ಭತ್ತಿ, ಪರಿಸರ ಸ್ನೇಹಿ ಗೋಮಯ ಗಣಪ ತಯಾರಿಕೆ ಸೇರಿದಂತೆ ಗೋ ತ್ಯಾಜ್ಯ ಬಳಸಿ ದ್ರವ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಅಭಿವೃದ್ಧಿಪಡಿಸಿದ ತಾಂತ್ರಿಕತೆ ಬಳಸಿ ರೈತರ ಮಟ್ಟದಲ್ಲಿ ಗೊಬ್ಬರ ಉತ್ಪಾದಿಸಿ ಸಾವಯವ ಕೃಷಿಗೆ ಒತ್ತು ನೀಡಲಾಗುತ್ತದೆ. ಪ್ರಾತ್ಯಕ್ಷಿಕೆ ಮೂಲಕ ಈ ಎಲ್ಲದರ ಮಾಹಿತಿ ನೀಡಲಾಗುತ್ತದೆ. ಗೋಶಾಲೆಗಳಲ್ಲಿ ಉಪ ಉತ್ಪನ್ನ ತಯಾರಿಕೆಗೆ ಪೂರಕ ತರಬೇತಿ ಶಿಬಿರ ಕೂಡ ಆಯೋಜಿಸಲಾಗುತ್ತದೆ.
ಗೋ ಸೇವಕರಿಗೆ ಗೌರವಧನ:ಪಶು ಸಂಗೋಪನಾ ಇಲಾಖೆ, ಕೆಎಂಎಫ್ ಸಂಸ್ಥೆ ಇಲ್ಲದೇ ಇರುವ 1,000 ಜಾನುವಾರು ಹೊಂದಿರುವ ಗ್ರಾಮಗಳಲ್ಲಿ ಅಮೃತ ಗೋ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಪ್ರತಿ ವರ್ಷ 250 ಕೇಂದ್ರಗಳಂತೆ ಮೂರು ವರ್ಷದಲ್ಲಿ 750 ಕೇಂದ್ರಗಳು ಸ್ಥಾಪನೆಯಾಗಲಿವೆ. 250 ಗೋ ಸೇವಕರಿಗೆ ಪ್ರತಿ ತಿಂಗಳು 5000 ರೂ. ಗೌರವಧನ ನೀಡುವ ಯೋಜನೆಯೊಂದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.