ಬೆಂಗಳೂರು: ಕೇಂದ್ರ ಬಜೆಟ್ ಸೋಮವಾರ ಮಂಡನೆಯಾಗಲಿದೆ. ಕೋವಿಡ್-19 ಮಹಾಮಾರಿ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟು ಮಧ್ಯೆ ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಬಜೆಟ್ ಮಂಡನೆ ಮಾಡುತ್ತಿದೆ. ಕೇಂದ್ರ ಬಜೆಟ್ನತ್ತ ರಾಜ್ಯವೂ ಹಲವು ನಿರೀಕ್ಷೆಗಳನ್ನು ಇಟ್ಟಿದೆ.
ಕೇಂದ್ರ ಬಜೆಟ್ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಲಾಕ್‌ಡೌನ್ ಬಳಿಕ ಕೇಂದ್ರ ಸರ್ಕಾರ ಬಜೆಟ್ ಮಂಡಿಸುತ್ತಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಬಜೆಟ್ ಮಂಡನೆಯಾಗುತ್ತಿದೆ. ಇತ್ತ ಕೇಂದ್ರ ಬಜೆಟ್ ಮೇಲೆ ರಾಜ್ಯ ಕೆಲ ನಿರೀಕ್ಷೆಗಳನ್ನು ಇಟ್ಟಿದೆ. ಆರ್ಥಿಕ ಸಂಕಷ್ಟದಿಂದ ಸೊರಗಿರುವ ರಾಜ್ಯ ಸರ್ಕಾರ, ಕೇಂದ್ರ ಬಜೆಟ್ನಿಂದ ಹೆಚ್ಚಿನ ಅನುದಾನವನ್ನು ನಿರೀಕ್ಷಿಸಿದೆ.
ಈಗಾಗಲೇ ರಾಜ್ಯ ಸರ್ಕಾರದ ಪರವಾಗಿ ಸಚಿವ ಬಸವರಾಜ್ ಬೊಮ್ಮಾಯಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದು, ರಾಜ್ಯದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದರಂತೆ ರಾಜ್ಯ ಸರ್ಕಾರ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ವಿಶೇಷ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದೆ.
15ನೇ ಹಣಕಾಸು ಆಯೋಗ ತನ್ನ 2020-21 ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಹಣಕಾಸು ನೆರವು ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಸ್ವೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಕೇಂದ್ರ ಸರ್ಕಾರ ತನ್ನ ಅಂದಾಜು ಪರಿಷ್ಕರಿಸುವ ವೇಳೆ ರಾಜ್ಯದ ಹಿತವನ್ನು ಗಮನದಲ್ಲಿಡುವಂತೆ ಕೇಂದ್ರ ಹಣಕಾಸು ಸಚಿವೆಗೆ ಮನವಿ ಮಾಡಲಾಗಿದೆ. ಇದರಿಂದ ರಾಜ್ಯದ ವೆಚ್ಚ ಬಾಧ್ಯತೆ ಮೇಲೆ ಬೀಳುವ ಪ್ರತಿಕೂಲ ಪರಿಣಾಮ ತಪ್ಪಲಿದೆ. ಈ ಸಂಕಷ್ಟದ ಕಾಲದಲ್ಲಿ ರಾಜ್ಯದ ಅನುದಾನ ಹಂಚಿಕೆಯನ್ನು ಪರಿಷ್ಕರಿಸದಂತೆ ಮನವಿ ಮಾಡಿದೆ.
ಕೇಂದ್ರದ ನೆರೆ ಪರಿಹಾರ ಹಣದತ್ತ ನಿರೀಕ್ಷೆ
ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಸುರಿದ ಭಾರೀ ಮಳೆಗೆ ರಾಜ್ಯದಲ್ಲಿ ಭೀಕರ ಅತಿವೃಷ್ಟಿ ಉಂಟಾಗಿತ್ತು. ಈ ಹಿನ್ನೆಲೆ ನೆರೆ ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿದೆ. ನೆರೆ ಪರಿಹಾರವಾಗಿ ಎನ್ಡಿಆರ್ಎಫ್/ಎಸ್ಡಿಆರ್ಎಫ್ನಡಿ ರಾಜ್ಯ ಕೋರಿದ್ದ 2261 ಕೋಟಿ ರೂ. ಪೈಕಿ ಕೇಂದ್ರ 1369 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿಕೆ ಮೊತ್ತವನ್ನು ಬಜೆಟ್ ಮೂಲಕ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಲು ಮನವಿ
ಕೃಷ್ಣಾ ಮೇಲ್ದಂಡೆ ಯೋಜನೆ 3 ಮತ್ತು ಎತ್ತಿನಹೊಳೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ 3ಕ್ಕೆ 51,148 ಕೋಟಿ ರೂ. ವೆಚ್ಚವಾಗಲಿದ್ದು, ಉ. ಕರ್ನಾಟಕದ ಏಳು ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ನೀರಾವರಿಯೇತರ ಭೂಮಿಗೆ ನೀರಾವರಿ ಒದಗಿಸಲಿದೆ. ಈ ಯೋಜನೆಯಿಂದ ಸುಮಾರು 1,21,90,982 ಜನರಿಗೆ ಅನುಕೂಲವಾಗಲಿದೆ.