ಬೆಂಗಳೂರು :ಭೂಮಾಪನ ಶುಲ್ಕದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ ವಿರೋಧ ವ್ಯಕ್ತವಾದ ಹಿನ್ನೆಲೆ ಶುಲ್ಕ ಏರಿಕೆಯಲ್ಲಿ ಸ್ವಲ್ಪಮಟ್ಟಿನ ಇಳಿಕೆ ಮಾಡಲಾಗಿದೆ. ಕಂದಾಯ ಇಲಾಖೆಯ ಭೂಮಾಪನ, 11-ಇ ನಕ್ಷೆ, ಭೂ ಪರಿವರ್ತನೆ ಮತ್ತು ತತ್ಕಾಲ್ ಪೋಡಿಗೆ ಶುಲ್ಕ ಹೆಚ್ಚಳ ಮಾಡಿತ್ತು. ಇದೀಗ ಮತ್ತೊಮ್ಮೆ ಪರಿಷ್ಕರಿಸಿ ಶುಲ್ಕ ಕಡಿಮೆ ಮಾಡುವಂತೆ ಸರ್ಕಾರ ಆದೇಶ ನೀಡಿದೆ.
ಈ ಹಿಂದೆ ಆಡಳಿತಾತ್ಮಕ ವೆಚ್ಚ ನಿರ್ವಹಣಾ ವೆಚ್ಚ ಮತ್ತು ಖಾಸಗಿ ಭೂಮಾಪಕರ ಸೇವಾ ಶುಲ್ಕದ ಹೆಚ್ಚಳದ ಹೊರೆಯನ್ನು ಜಮೀನುಗಳ ಮಾಲೀಕರಿಗೆ ವರ್ಗಾಯಿಸಿರುವ ಕಂದಾಯ ಇಲಾಖೆ, ಭೂಮಾಪನ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿತ್ತು. ಫೆಬ್ರವರಿ 1ರಿಂದಲೇ ಪರಿಷ್ಕೃತ ದರ ಜಾರಿಯಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಲ್ಕ ಏರಿಕೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಮಾಡಿದೆ.
ಶುಲ್ಕದಲ್ಲಿ ಇಳಿಕೆಯಾಗಿದ್ದೆಷ್ಟು?: ಎರಡು ಎಕರೆಗೆ 1,500 ರೂ. ಹಾಗೂ ಪ್ರತಿ ಎಕರೆಗೆ 400 ರೂ. ನಂತೆ ನಿಗದಿ ಮಾಡಿದೆ. ಆದರೆ, ಗರಿಷ್ಠ ಮಿತಿಯನ್ನು ನಿಗದಿ ಮಾಡಿಲ್ಲ. ನಗರ ಪ್ರದೇಶದಲ್ಲಿ ಎರಡು ಎಕರೆವರೆಗೂ 2,500 ರೂ. ಮತ್ತು ನಂತರದ ಪ್ರತಿ ಎಕರೆಗೆ 1,000 ರೂ. ನಂತೆ ಗರಿಷ್ಠ 5,000 ರೂ.ವರೆಗೆ ಶುಲ್ಕ ವಿಧಿಸಲು ಅನುಮತಿ ನೀಡಲಾಗಿತ್ತು. ಪರಿಷ್ಕರಣೆ ಆದೇಶದಲ್ಲಿ ನಗರ ಪ್ರದೇಶದ ಶುಲ್ಕದಲ್ಲಿ ಬದಲಾವಣೆ ಆಗಿಲ್ಲ. ಆದರೆ, ಗರಿಷ್ಠ ಮಿತಿ ಕೈಬಿಡಲಾಗಿದೆ.
ಪೋಡಿಯಾದ ಜಮೀನು ಅಥವಾ ಜಾಗ ಬೇರೆಯವರಿಂದ ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವುದೇ ಹದ್ದುಬಸ್ತು. ಮಾಲೀಕರಿಗೆ ತಮ್ಮ ಜಮೀನು ಮತ್ತು ಜಾಗದ ವಿಸ್ತೀರ್ಣ ಬಗ್ಗೆ ಸಮರ್ಪಕವಾಗಿ ತಿಳಿದಿರುವುದಿಲ್ಲ. ಹಾಗಾಗಿ, ಹದ್ದುಬಸ್ತು ಮಾಡಿಕೊಂಡರೆ ಜಮೀನು ಎಲ್ಲಿ ಒತ್ತುವರಿಯಾಗಿದೆ, ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಒತ್ತುವರಿ ಜಾಗ ತೆರವುಗೊಳಿಸಿ ನಿಖರ ಗಡಿ ಗುರುತಿಸಬಹುದು.
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 131(ಬಿ)ರಡಿ ಸಾರ್ವಜನಿಕರಿಂದ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿ ಸಲ್ಲಿಕೆಯಾಗುವ ಹದ್ದುಬಸ್ತು ಅರ್ಜಿಗಳಿಗೆ ಪ್ರತಿ ಸರ್ವೆ ನಂಬರ್‌ಗೆ 35 ರೂ. ಇತ್ತು. ಅಲ್ಲದೆ, ಗ್ರಾಮದ 4 ಸರ್ವೆ ಅಥವಾ ಹಿಸ್ಸಾ ನಂಬರ್‌ಗೆ 35 ರೂ. ಇತ್ತು. ಹೆಚ್ಚುವರಿ ಸರ್ವೆ ಅಥವಾ ಹಿಸ್ಸಾ ನಂಬರ್ಗಳಿಗೆ 10 ರೂ.ಇತ್ತು.