ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಾಗೂ ಹೊಸ ತಳಿ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಹಲವು ಕಠಿಣ ನಿಯಮಗಳನ್ನ ಜಾರಿ ಮಾಡುತ್ತಿದೆ. ಕೊರೊನಾ ಕ್ಲಸ್ಟರ್ ಭೀತಿ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲು ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಸಲಹೆ ನೀಡಿದೆ. ಪ್ರಮುಖವಾಗಿ ಮೈಸೂರು, ಧಾರವಾಡ, ಬೆಂಗಳೂರಲ್ಲಿ ಕ್ಲಸ್ಟರ್ ಪತ್ತೆಯಾದ ಹಿನ್ನೆಲೆ, ಶಿಕ್ಷಣ ಸಂಸ್ಥೆಗಳಲ್ಲಿ ಕೆಲ ನಿರ್ಬಂಧ ವಿಧಿಸುವಂತೆ ಸಲಹೆ ನೀಡಲಾಗಿದೆ.
ಮೆಡಿಕಲ್, ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳಿಗೆ ಎರಡು ತಿಂಗಳುಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮುಂದೂಡಲು ಸಲಹೆ ಬಂದಿದೆ. ಯಾವುದೇ ಕಾರ್ಯಾಗಾರ, ಸೆಮಿನಾರ್ಗಳು ಇದ್ದರೆ ಸಾಧ್ಯವಾದರೆ ಮುಂದೂಡಿ ಅಥವಾ ಕಡಿಮೆ ವಿದ್ಯಾರ್ಥಿಗಳೊಂದಿಗೆ ನಡೆಸಿ, ಉಳಿದ ವಿದ್ಯಾರ್ಥಿಗಳಿಗೆ ವರ್ಚುವಲ್ ಮೂಲಕ ಅವಕಾಶ ಕಲ್ಪಿಸಿ ಅಂತ ತಿಳಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ನಿತ್ಯ ಸ್ಕ್ರೀನಿಂಗ್ ಮಾಡಬೇಕು. ಆರೋಗ್ಯ ವಲಯದಲ್ಲಿರುವವರು ಆದಷ್ಟು ವರ್ಚುವಲ್ ಸಭೆಗಳನ್ನು ನಡೆಸಬೇಕಾಗಿ ಸಲಹೆ ನೀಡಿದೆ. ಜೊತೆಗೆ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ತಿಳಿಸಿದೆ.