ಬೆಂಗಳೂರು:ಮಳೆ ಆಘಾತ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆದ ಅನ್ನದಾತರು ಕಂಗಾಲಾಗಿದ್ದಾರೆ. ಸಂಕಷ್ಟದಲ್ಲಿರುವ ರೈತರು ಇದೀಗ ಕನಿಷ್ಠ ಬೆಂಬಲ ಬೆಲೆ ನಿರೀಕ್ಷೆಯಲ್ಲಿದ್ದಾರೆ. ನೀರಾವರಿ ಪ್ರದೇಶದ ಕ್ವಿಂಟಲ್ ಭತ್ತ ಬೆಳೆಯಲು 2 ಸಾವಿರ ರೂ. ಖರ್ಚಾಗಿದ್ದರೆ, ಮಳೆಯಾಶ್ರಿತ ಪ್ರದೇಶದ ವೆಚ್ಚ ಸರಾಸರಿ 3 ಸಾವಿರ ರೂ.ಗಳಷ್ಟಾಗಿದೆ. ಪ್ರತಿ ಎಕರೆಗೆ 500 ರೂ ಖರ್ಚು ಮಾಡಬೇಕಾಗಿದೆ. ಆದರೆ ಮಾರುಕಟ್ಟೆಯಲ್ಲಿ ಆರ್‌ಎನ್‌ಆರ್ ಹೊಸತಳಿ ಹೊರತುಪಡಿಸಿ ಉಳಿದ ಭತ್ತದ ಬೆಲೆ 1,300 ರಿಂದ 1,500 ರೂ.ಗಳಷ್ಟಿದೆ.
ನಿಯಮದ ಪ್ರಕಾರ, ಎಂಎಸ್‌ಪಿಗಿಂತಲೂ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೆ ಸರ್ಕಾರ ಮಧ್ಯ ಪ್ರವೇಶಿಸಬೇಕು. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆ ಪ್ರಕಾರ ಗ್ರೇಡ್ ಎ ಭತ್ತಕ್ಕೆ ಕ್ವಿಂಟಲ್‌ಗೆ 1,960 ರೂ., ಸಾಮಾನ್ಯ 1,940 ರೂ.ಗಳಿದೆ. ಆದರೆ ರೈತರು ಸಿಕ್ಕಷ್ಟು ಬೆಲೆಗೆ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ.
ಉಪಸಮಿತಿ ಸಭೆ ಅನುಮಾನ:ಸದ್ಯ ಬೆಂಬಲ ಬೆಲೆ ನಿಗದಿಪಡಿಸುವ ಸಾಧ್ಯತೆ ಕಡಿಮೆ ಇದೆ. ಈಗಾಗಲೇ ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ನಿಗದಿಪಡಿಸಿ, ರಾಜ್ಯದ ಕೋರಿಕೆಯಂತೆ ಖರೀದಿ ಪ್ರಮಾಣ ಹಾಗೂ ಅವಧಿಗೆ ಅನುಮೋದನೆ ನೀಡಿದ್ದು, ಗಡುವು ಮುಗಿದಿದೆ. ಕೇಂದ್ರ ಸರ್ಕಾರ ಮುಂದಿನ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಪ್ರಕಟಿಸುವ ದಿನಗಳು ಹತ್ತಿರವಾಗಿವೆ. ನಂತರ ರಾಜ್ಯದ ಸಚಿವ ಸಂಪುಟದ ಉಪಸಮಿತಿ ಸಭೆ ಸೇರಲಿದ್ದು, ಸದ್ಯಕ್ಕೆ ಸಭೆ ಸೇರುವ ಲಕ್ಷಣಗಳಿಲ್ಲ.
ಒಂದು ವೇಳೆ ಭತ್ತ ಬೆಳೆದ ಜಿಲ್ಲೆಗಳ ಸಚಿವರು, ಸಂಸದ-ಶಾಸಕರು ಒತ್ತಡ ಹಾಕಿ, ಸಿಎಂ ವಿಶೇಷ ಮುತುವರ್ಜಿವಹಿಸಿದರೆ ಮಾತ್ರ ಬೆಲೆ ಕುಸಿತದ ಸುಳಿಯಿಂದ ರೈತರನ್ನು ಪಾರು ಮಾಡಬಹುದಾಗಿದೆ. ಈ ಬಾರಿ 1.10 ಲಕ್ಷ ಟನ್ ರಾಗಿ ಖರೀದಿಗೆ ಸರ್ಕಾರ ನಿರ್ಧರಿಸಿತ್ತು. ಆದರೆ ರಾಗಿ ಬೆಳೆದ ಜಿಲ್ಲೆಗಳ ಒತ್ತಡಕ್ಕೆ ಸಿಎಂ ಬೊಮ್ಮಾಯಿ ಮಣಿದು, ಕೇಂದ್ರದ ಮನವೊಲಿಸಿ ಹೆಚ್ಚುವರಿ ಎರಡು ಲಕ್ಷ ಟನ್ ರಾಗಿ ಖರೀದಿಗೆ ಅನುಮತಿ ಪಡೆದಿದ್ದಾರೆ. ಅದೇ ರೀತಿ ಭತ್ತ ಖರೀದಿಗೂ ಅವಧಿ ವಿಸ್ತರಣೆಗೆ ಕೇಂದ್ರವನ್ನು ಒಪ್ಪಿಸಬೇಕು ಎನ್ನುವುದು ರೈತರ ಮುಖಂಡರ ಆಗ್ರಹ.
ಭತ್ತ ಉತ್ಪಾದನೆ ಎಷ್ಟು?:ಪ್ರಸಕ್ತ ಬೇಸಿಗೆ ಹಂಗಾಮಿಗೆ 3,07,033 ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಿದ್ದು, 13.49 ಲಕ್ಷ ಟನ್ ಉತ್ಪಾದನೆಯಾಗಿರುವ ಅಂದಾಜಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ನಂತರದ ಸ್ಥಾನಗಳಲ್ಲಿ ದಾವಣಗೆರೆ, ಮಂಡ್ಯ, ಶಿವಮೊಗ್ಗ, ಮೈಸೂರು, ಯಾದಗಿರಿ, ಹಾವೇರಿ ಜಿಲ್ಲೆಗಳಿವೆ.
ಬೆಂಬಲ ಬೆಲೆ ಯೋಜನೆಯಡಿ ಮಾರ್ಚ್ 31ರವರೆಗೆ ಭತ್ತ ಖರೀದಿಗೆ ಅವಕಾಶ ನೀಡಿದ್ದರೂ ರೈತರು ಸೂಕ್ತವಾಗಿ ಸ್ಪಂದಿಸಲಿಲ್ಲ. ಗಡುವು ಮುಗಿದಿರುವ ಕಾರಣ ಮತ್ತೆ ವಿಸ್ತರಿಸುವುದು ಕಷ್ಟಸಾಧ್ಯ. ಭತ್ತ ಬೆಳೆದ ರೈತರ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಗಮನಸೆಳೆಯಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಇದನ್ನೂ ಓದಿ:ಅನ್ನ ನೀಡುವ ರೈತರಿಗೆ ಕಿರುಕುಳ ನಿಲ್ಲಿಸಿ ಭತ್ತ ಖರೀದಿಸಿ: ತೆಲುಗಿನಲ್ಲೇ ರಾಹುಲ್ ಗಾಂಧಿ ಟ್ವೀಟ್