ಬೆಂಗಳೂರು:ನನ್ನ ವಿರುದ್ಧದ ಆರೋಪಗಳಿಗೆ ನಾನು ಆಣೆ-ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನಾನು ಪ್ರಾಮಾಣಿಕವಾಗಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಸಿದ್ಧನಿದ್ದೇನೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.
ತಮ್ಮ ಮೇಲಿನ ಲಂಚದ ಆರೋಪದ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಎಸ್ಸಿ ಸಮುದಾಯದ ಸಚಿವನೆಂದು ಈ ರೀತಿ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನನ್ನ ವಿರುದ್ಧದ ಆರೋಪಗಳಿಗೆ ನಾನು ಆಣೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಧರ್ಮಸ್ಥಳ ಇರಬಹುದು, ಎಲ್ಲಿ ಬೇಕಾದರೂ ಬಂದು ಪ್ರಮಾಣ ಮಾಡುತ್ತೇನೆ ಎಂದರು.
ನನಗೆ ಯಾರೂ ರೈಟ್ ಹ್ಯಾಂಡ್ ಇಲ್ಲ. ಮಂಜುನಾಥ್ ಹಾಗೂ ಹರ್ಷ ಯಾರು ಅಂತ ಗೊತ್ತಿಲ್ಲ. ಅವರು ಕೋಲಾರದವರು ಅಷ್ಟೇ. ಅವರ ಬಗ್ಗೆ ನನಗೆ ಮಾಹಿತಿ ಇಲ್ಲವೇ ಇಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನನ್ನ ಮೇಲೆ ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ. ಈಗಾಗಲೇ ಇಲಾಖೆ ತನಿಖೆಗೆ ಆದೇಶ ಮಾಡಿದ್ದೀನಿ. ಅಬಕಾರಿ ಇಲಾಖೆಯಲ್ಲಿ ಮೋಹನ್ ಕುಮಾರ್ ಭ್ರಷ್ಟಾಚಾರಿಯಾಗಿದ್ದಾರೆ.
ಮೋಹನ್ ಕುಮಾರ್ ಪುತ್ರಿ ಇದೆಲ್ಲಾ ಮಾಡುತ್ತಿದ್ದಾರೆ. ದುರುದ್ದೇಶದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ಎಸ್ಸಿ ಸಮುದಾಯವನು. ನನ್ನನ್ನ ಹೆದರಿಸಲು ಬ್ಲಾಕ್ಮೇಲ್ ಮಾಡಲು ಪ್ರಯತ್ನ ಮಾಡಲಾಗಿದೆ. ವರ್ಗಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮೋಹನ್ ಕುಮಾರ್ ಭ್ರಷ್ಟಾಚಾರಿ ಎಂದು ಅಧಿಕಾರಿಗಳು ಹೇಳಿದ್ದು, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ. ನಾನು ಭ್ರಷ್ಟಾಚಾರಿ ಅಲ್ಲ. ನಾನು ಯಾವುದೇ ಲಂಚ ತೆಗದುಕೊಂಡಿಲ್ಲ ಎಂದರು.
ಇನ್ನು, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಈಗಾಗಲೇ ಪಾರ್ಟಿ, ಹೋಟೆಲ್, ಪಬ್ಗಳಿಗೆ ನಿರ್ಬಂಧ ಹೇರಲಾಗಿದೆ. ವಿದೇಶದಿಂದ ಬಂದವರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಆರಂಭ ಸದ್ಯ ಬೇಡ. ಇನ್ನು ಸ್ಪಲ್ಪ ದಿನ ಮುಂದೂಡಿದ್ರೆ ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.