ಬೆಂಗಳೂರು: 2021-22ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಅತಿಥಿ ಉಪನ್ಯಾಸಕರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಹಾಕುವಾಗ ತಪ್ಪು ಮಾಹಿತಿ ಒದಗಿಸಿದ್ದ ಅಭ್ಯರ್ಥಿಗಳಿಗೆ ಮಾಹಿತಿ ಸರಿಪಡಿಸಿಕೊಳ್ಳಲು ಫೆಬ್ರವರಿ 12 ಮತ್ತು 13ರ ಅವಧಿಯಲ್ಲಿ ಎರಡು ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪ್ರದೀಪ್, ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ಈಗಾಗಲೇ ಮೊದಲನೇ ಸುತ್ತಿನ ಕೌನ್ಸೆಲಿಂಗ್ ಮುಗಿದಿದ್ದು, ಆಯ್ಕೆಯಾಗಿರುವ ಬಹುತೇಕರು ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಂಡಿದ್ದಾರೆ. ಆದರೆ, ಕೆಲವರು ಅರ್ಜಿ ಸಲ್ಲಿಸುವಾಗ ಸೇವಾ ಅನುಭವದ ವಿವರ, ಸ್ನಾತಕೋತ್ತರ ಪದವಿಯ ಅಂಕಗಳು, ಪಿಎಚ್.ಡಿ ಅಥವಾ ಎಂ.ಫಿಲ್ ಪದವಿಗೆ ಸಂಬಂಧಿಸಿದ ವಿವರಗಳನ್ನು ತಪ್ಪಾಗಿ ತುಂಬಿದ್ದು, ಇವುಗಳನ್ನು ಸರಿಪಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ದಿನ ಅವಕಾಶ ಕೊಡಲಾಗುತ್ತಿದೆ ಎಂದು ವಿವರಿಸಿದ್ದಾರೆ.