ಬೆಂಗಳೂರು: ಕೊರೊನಾ ಲಸಿಕೆ ವಿತರಣೆಯನ್ನು ಸಹ ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಗಿಮಿಕ್‌ಗೆ ಬಳಸಿಕೊಂಡಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ತಮ್ಮ ಪ್ರಚಾರಕ್ಕೋಸ್ಕರ ಲಸಿಕೆಗಳ ಕೃತಕ ಅಭಾವ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರೇ, ದೇಶದ ಜನತೆ ಕೊರೊನಾ ಜ್ವರದಿಂದ ನರಳಿ ಸಾಯುವಾಗ ಲಸಿಕೆ ಕೊಡದ ನೀವು ಈಗ ಲಸಿಕೆಗಳನ್ನು ರಾಜಕೀಯ ಸ್ಟಂಟ್‌ಗಳಿಗೆ, ಪ್ರಚಾರದ ಗಿಮಿಕ್‌ಗೆ ಬಳಸಿಕೊಂಡು ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎನ್ನುವಿರಲ್ಲ. ನಿಮಗೆ ಸ್ವಲ್ಪವಾದರೂ ಗಾಂಭೀರ್ಯತೆ, ಜನರೆಡೆಗೆ ಕಾಳಜಿ ಏಕಿಲ್ಲ? ಎಂದು ಪ್ರಶ್ನಿಸಿದೆ.
ರಾಜ್ಯ ಸರ್ಕಾರವನ್ನು ಸಹ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷ, ರಾಜ್ಯದ ಕಾನೂನು ಸುವ್ಯವಸ್ಥೆ ಅದೆಷ್ಟು ಅಧೋಗತಿಗೆ ಇಳಿದಿದೆ ಎಂದರೆ, ಗೃಹ ಮಂತ್ರಿಯೇ ನನ್ನ ಅತ್ಯಾಚಾರವಾಗುತ್ತಿದೆ ಎನ್ನುವಷ್ಟು. ಮುಖ್ಯಮಂತ್ರಿಗಳಿಗೆ ಕೊಲೆ ಬೆದರಿಕೆ ಹಾಕಿಯೂ ಆರೋಪಿಗಳು ರಾಜಾರೋಷವಾಗಿ ತಿರುಗುವಷ್ಟು. ಇನ್ನು ಸಾಮಾನ್ಯ ಜನತೆಗೆ ರಕ್ಷಣೆ ಸಿಗುವುದೇ? ಬಿಜೆಪಿ ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಸ್ಥಾಪಿಸುತ್ತಿದೆ ಎಂದು ಆರೋಪಿಸಿದೆ.
ರಾಜ್ಯಾದ್ಯಂತ ಪಶುವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದ ರೈತರು ತಮ್ಮ ಜಾನುವಾರುಗಳ ಚಿಕಿತ್ಸೆಗೆ ಪರದಾಡುವಂತಾಗಿದೆ. ಈ ಸರ್ಕಾರ ಹೀಗೂ ರೈತರ ಮೇಲೆ ದ್ವೇಷ ತೀರಿಸಿಕೊಳ್ಳುತ್ತಿದೆ. ಗೋವಿನ ಹೆಸರಲ್ಲಿ ರಾಜಕೀಯ ಮಾಡುವ ರಾಜ್ಯ ಬಿಜೆಪಿ ರೈತರ ಗೋವಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಲ್ಲಿ ನಿರ್ಲಕ್ಷಿಸಿ ಡೋಂಗಿ ಗೋರಕ್ಷಕರೆಂದು ನಿರೂಪಿಸಿದ್ದಾರೆ ಎಂದಿದೆ.
ಮೊನ್ನೆ ಒಬ್ಬ ಭಯೋತ್ಪಾದಕ ಕತ್ತಿ, ತಲ್ವಾರ್ ಮನೆಯಲಿಟ್ಟುಕೊಳ್ಳಿ ಎಂದು ಕಾನೂನು ಬಾಹಿರದ ಮಾತಾಡುತ್ತಾನೆ. ಮತ್ತೊಬ್ಬ ಮೈಸೂರಿನ ಅಧಿಕಾರಿಗಳಿಗೆ ಕೊಲೆ ಬೆದರಿಕೆಯೊಡ್ಡುತ್ತಾನೆ. ಇನ್ನೊಬ್ಬ ಮುಖ್ಯಮಂತ್ರಿಗೆ ಜೀವ ಬೆದರಿಕೆ ಹಾಕುತ್ತಾನೆ. ಈ ಕ್ರಿಮಿಗಳನ್ನು ಬಂಧಿಸದಿರುವುದೇಕೆ ಬಸವರಾಜ ಬೊಮ್ಮಾಯಿ ಅವರೇ? ನಿಮ್ಮ ಸರ್ಕಾರವೇ ಇವರನ್ನು ಸಾಕುತ್ತಿದೆಯೇ? ಎಂದು ಪ್ರಶ್ನಿಸಿದೆ.