ಬೆಂಗಳೂರು: ಷೇರುಪೇಟೆ ಕುಸಿತ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ರಾಜ್ಯದಲ್ಲಿನ ಸಮಸ್ಯೆ ಬಗ್ಗೆ ಸಿಎಂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಟ್ವಿಟರ್ ಮೂಲಕ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದೆ.
ಮೋದಿ, ಬಿಎಸ್ವೈ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ - ಏಕವ್ಯಕ್ತಿ ಸರ್ಕಾರದ ಸಿಎಂ ಬಿಎಸ್ ಯಡಿಯೂರಪ್ಪ
ಮೋದಿ, ಬಿಎಸ್ವೈ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಮೋದಿ ದುರಾಡಳಿತಕ್ಕೆ ಭಾರತ ಬಲಿ ಹಾಗೂ ಏಕವ್ಯಕ್ತಿ ಸರ್ಕಾರದ ಸಿಎಂ ಬಿ.ಎಸ್.ಯಡಿಯೂರಪ್ಪ ಎಂದು ಪೋಸ್ಟ್ ಮಾಡಿದೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ ಮೂಲಕ ಇಂದು ಟ್ವೀಟ್ ಮಾಡಲಾಗಿದ್ದು, ಐತಿಹಾಸಿಕ ಕುಸಿತ ಕಂಡ ಷೇರು ಮಾರುಕಟ್ಟೆ 17 ವರ್ಷದಲ್ಲೇ ಅತೀ ಪಾತಾಳಕ್ಕೆ ಕುಸಿತ, ಭಾರತದ ಆರ್ಥಿಕತೆಗೆ ಗಂಡಾಂತರ, ಮೋದಿ ದುರಾಡಳಿತಕ್ಕೆ ಭಾರತ ಬಲಿ, ಷೇರುಪೇಟೆಯ 12 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ ಎಂದು ಮೋದಿ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದೆ.
ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್, ಏಕವ್ಯಕ್ತಿ ಸರ್ಕಾರದ ಸಿಎಂ ಬಿ.ಎಸ್.ಯಡಿಯೂರಪ್ಪನವರೇ, ಅಕ್ರಮ ವರ್ಗಾವಣೆ ದಂಧೆಯಿಂದ ತಮಗೆ ಪುರುಸೊತ್ತು ಸಿಕ್ಕಿಲ್ಲವೇ? ಕೆಲವೆಡೆ ಅನಾವೃಷ್ಟಿ ಕೆಲವೆಡೆ ಅತಿವೃಷ್ಟಿ, ಜಲಪ್ರಳಯದಿಂದ 5 ಜಿಲ್ಲೆಗಳು ಮುಳುಗಿವೆ. ರೈತರು ಕಂಗಾಲಾಗಿದ್ದಾರೆ, ಜನಜೀವನ ಅಸ್ತವ್ಯಸ್ತವಾಗಿದೆ. ನಿಮ್ಮಂತೆಯೇ ಆಡಳಿತ ಯಂತ್ರವೂ ನಿಷ್ಕ್ರಿಯ; ಈ ದುರಂತಗಳಿಂದ ಜನತೆ ಪಾರಾಗುವುದು ಹೇಗೆ? ಎಂದು ಟ್ವೀಟ್ ಮಾಡಿ ಪ್ರಶ್ನೆ ಮಾಡಿದೆ.