ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಟ್ವೀಟ್ ಮೂಲಕ ತನ್ನ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್ ಪಕ್ಷ, ಸರ್ಕಾರದಿಂದ ಅಭಿವೃದ್ಧಿ ಕಡೆಗಣನೆಯಾಗಿದೆ. ಸಾಲದ ಹೊರೆ ಹೆಚ್ಚಾಗಿದ್ದು, ಬೆಲೆ ಏರಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ದಕ್ಷ ಅಧಿಕಾರಿಗಳಿಗೆ ನೀಡಬೇಕಾದ ಗೌರವವನ್ನು ಸರ್ಕಾರ ನೀಡುತ್ತಿಲ್ಲ ಎಂದು ಕಿಡಿಕಾರಿದೆ.
ರಾಜ್ಯ ಬಿಜೆಪಿ ಹಾಗೂ ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ಬಿಜೆಪಿ ನಾಯಕರು ರಾಜ್ಯದ ಜನರ ಹಿತ ಕಾಯುವ ಬದಲಾಗಿ 'ಬಿ ಎಸ್ ಯಡಿಯೂರಪ್ಪ ಮುಕ್ತ ಬಿಜೆಪಿ' ಮಾಡುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಮನೆಯೊಂದು ನೂರಾರು ಬಾಗಿಲು ಎಂಬಂತಾಗಿದ್ದು, ಜೊತೆಗೆ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಒಟ್ಟಿನಲ್ಲಿ "ಸಿಎಂ ವೀಕು, ಬಿಜೆಪಿ ಫೇಕು" ಎನ್ನುವ ಮಾತು ಸೂಕ್ತ ಎಂದು ಲೇವಡಿ ಮಾಡಿದೆ.
ಬಿಜೆಪಿ ಆಡಳಿತದಲ್ಲಿ ರಾಜ್ಯದ ಸಾಲದ ಹೊರೆ ಗಣನೀಯ ಏರಿಕೆಯಾಗಿದೆ. ಬಿಜೆಪಿ ಕರ್ನಾಟಕವನ್ನು ಸಾಲಗಾರರ ರಾಜ್ಯವನ್ನಾಗಿಸಿದೆ. ಪ್ರಸಕ್ತ ಸಾಲಿನ ಬಜೆಟ್ ಅಂದಾಜಿನಂತೆ ರಾಜ್ಯದ ಸಾಲ 53,000 ಕೋಟಿ ರೂ., ಕೊರೊನಾದಿಂದಾದ ಆದಾಯ ನಷ್ಟ ಭರಿಸಲು ಹೆಚ್ಚುವರಿ 33,000 ಕೋಟಿ ರೂ., ಜಿಎಸ್‍ಟಿ ಪರಿಹಾರ ಭರಿಸಲು 12,000 ಕೋಟಿ ರೂ. ಸಾಲ ಮಾಡಲು ನಿರ್ಧಾರ ಮಾಡಲಾಗಿದೆ. ಒಂದೇ ವರ್ಷದಲ್ಲಿ ಸಾಲದ ಮೊತ್ತ ದುಪ್ಪಟ್ಟು ಮಾಡಲಾಗಿದ್ದು, ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿರುವುದು ಬಿಜೆಪಿ ಸಾಧನೆ ಎಂದು ಹೇಳಿದೆ.
ಅಸಮರ್ಥ ಸರ್ಕಾರ :ರಾಜ್ಯ ಬಿಜೆಪಿ ಸರ್ಕಾರದ ಅಸಮರ್ಥತೆಯಿಂದಾಗಿ ರಾಜ್ಯದಲ್ಲಿ ಕೈಗಾರಿಕೆಗಳು ಹಾಗೂ ಕಾರ್ಮಿಕರ ನಡುವೆ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಬೆಂಗಳೂರಿನ ಓಲಾ ಕಂಪನಿ ಘಟಕ ತಮಿಳುನಾಡಿನತ್ತ ಮುಖ ಮಾಡಿದೆ. ರಾಜ್ಯದಲ್ಲಿ ಬಂಡವಾಳ ಹೂಡಬೇಕಿದ್ದ ಪೆಗಟ್ರಾನ್ ಸಂಸ್ಥೆ ವಿಮುಖವಾಗಿದೆ. ಯುವಕರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಧುಕರ ಶೆಟ್ಟಿ ಅವರು ಬಿ ಎಸ್ ಯಡಿಯೂರಪ್ಪ ಅವರ ಅಕ್ರಮ ಡಿನೋಟಿಫಿಕೇಶನ್ ಪ್ರಕರಣ, ಕೆಐಎಡಿಬಿ ಭೂ ಹಗರಣ ಪತ್ತೆ, ಅಕ್ರಮ ಗಣಿಗಾರಿಕೆ ತನಿಖೆ, ಲಂಚ ಸ್ವೀಕರಿಸುತ್ತಿರುವಾಗ ಬಿಜೆಪಿ ಶಾಸಕ ಸಂಪಂಗಿಯ ಬಂಧನದ ಮೂಲಕ ಬಿಜೆಪಿ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದರು. ಬಿಜೆಪಿ ದ್ವೇಷ ರಾಜಕಾರಣದಿಂದಾಗಿ ದಕ್ಷ ಅಧಿಕಾರಿಗೆ ಅಪಮಾನ ಮಾಡಿದೆ. ದಿ.ಮಧುಕರ್ ಶೆಟ್ಟಿ ಅವರು ದಕ್ಷ, ಪ್ರಾಮಾಣಿಕ ಐಪಿಎಸ್ ಅಧಿಕಾರಿ.
ಹಲವು ಯುವ ಅಧಿಕಾರಿಗಳಿಗೆ ಸ್ಫೂರ್ತಿಯಾಗಿ, ಯುವ ಸಮುದಾಯಕ್ಕೆ ಮಾದರಿಯಾಗಿದ್ದವರು. ಅವರ ಹೆಸರನ್ನು ವರ್ತೂರು ಕೋಡಿ ವೃತ್ತಕ್ಕೆ ಇಡುವ ಪ್ರಸ್ತಾಪವನ್ನು ನಿರಾಕರಿಸಿ, ರಾಜ್ಯ ಸರ್ಕಾರ ಕೀಳು ಮಟ್ಟದ ದ್ವೇಷ ರಾಜಕಾರಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಬೆಲೆ ಏರಿಕೆಯ ಮೇಲೆ ನಿಯಂತ್ರಣ ಸಾಧಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರದ ಜನ ವಿರೋಧಿ, ಕೆಟ್ಟ ಆರ್ಥಿಕ ನೀತಿಗಳಿಂದಾಗಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಪರ ಕೆಲಸ ಮಾಡುವ ಯಾವುದೇ ಇಚ್ಛಾಶಕ್ತಿ ಬಿಜೆಪಿಗಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.