ಬೆಂಗಳೂರು: ಕೇಂದ್ರ ಸರ್ಕಾರದ ಆರ್ಥಿಕ ನೀತಿ ಖಂಡಿಸಿ ರಾಜ್ಯ ಕಾಂಗ್ರೆಸ್ ನ.11ಕ್ಕೆ ಬೆಂಗಳೂರಿನ ಟೌನ್ಹಾಲ್ನಲ್ಲಿ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ದಿನೇಶ್ ಗುಂಡೂರಾವ್ ಸುದ್ದಿಗೋಷ್ಟಿ ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕರ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನ.11 ರಂದು ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ದೇಶದ ಆರ್ಥಿಕತೆ ಕುಸಿದಿದ್ದು, ಇದರ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದೇವೆ. ಹಿರಿಯ ಕೈ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ ಎಂದು ವಿವರಿಸಿದರು.
ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ಉದ್ದಿಮೆಗಳು ಸಂಕಷ್ಟದಲ್ಲಿವೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ತಪ್ಪು ನಿರ್ಧಾರ, ಉದ್ಧಟತನ. ಕೇಂದ್ರ ಹಣಕಾಸು ಸಚಿವೆ ಈ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಅವರು ಆರ್ಥಿಕ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಅನರ್ಹ ಶಾಸಕರ ವಿಚಾರವಾಗಿ, ಸಿಎಂ ಅಡಿಯೋ ಕ್ಲಿಪ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಕಮಲ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿಯೇ ಆಗಿದೆ. ಇದಕ್ಕೆ ಅಮಿತ್ ಶಾ ಸಾತ್ ನೀಡಿದ್ದಾರೆ. ಸರ್ಕಾರವನ್ನು ಬೀಳಿಸುವುದೇ ಬಿಜೆಪಿಯ ಕೆಲಸವಾಗಿದೆ. ಬಿಜೆಪಿ, ವಿರೋಧ ಪಕ್ಷಗಳ ಶಾಸಕರ ಖರೀದಿ, ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು. ಈ ಹಿನ್ನೆಲೆ ರಾಷ್ಟ್ರಪತಿಗೆ ದೂರು ನೀಡುವ ಸಂಬಂಧ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಆಡಿಯೋ ಕ್ಲಿಪ್ ಸಂಬಂಧ ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದೇವೆ. ಸಂವಿಧಾನ ವಿರೋಧಿ ಸಂಚು ಮಾಡಿ, ಸರ್ಕಾರ ಪತನಗೊಳಿಸಿದ್ದಾರೆ. ಇದಕ್ಕೆ ಅವರದ್ದೇ ಆಡಿಯೋ ಸಾಕ್ಷಿ ಇದೆ. ಹಲವು ಶಾಸಕರ ಹೇಳಿಕೆಗಳೂ ಇದಕ್ಕೆ ಪುಷ್ಠಿ ನೀಡುತ್ತಿದೆ. ಅವರಿಗೆ ಸಾಂವಿಧಾನಿಕ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆ ಇದೆಯಾ? ಎಂದು ಕಿಡಿ ಕಾರಿದರು. ಇನ್ನು ವೈದ್ಯರಿಗೆ ಮುಷ್ಕರ ಮಾಡುವ ಹಕ್ಕಿದೆ. ಸಮಸ್ಯೆ ಏನಿದೆ ಅನ್ನೋದನ್ನ ಸರ್ಕಾರ ಗುರುತಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.